ತಾಯಿಯಷ್ಟೇ ಪರಿಸರ ಸಂರಕ್ಷಣೆಗೂ ಮಹತ್ವ ನೀಡಿ

07rajesh1
Published on

ಚಾಮರಾಜನಗರ: ನಮ್ಮ ತಾಯಿಯಷ್ಟೇ ನಮ್ಮ ಸುತ್ತಲಿನ ಪರಿಸರ ಸಂರಕ್ಷಣೆಗೆ ಮಹತ್ವವನ್ನು ನೀಡಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಂಜುನಾಥ್ ಪ್ರಸನ್ನ ಸಲಹೆ ನೀಡಿದರು.

ನಗರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ನೆಹರು ಯುವ ಕೇಂದ್ರ, ಜೈ ಭುವನೇಶ್ವರಿ ಕನ್ನಡ ಯುವ ವೇದಿಕೆ ಹಾಗೂ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಸಹಯೋಗದಲ್ಲಿ ವಿಶ್ವ ತಾಯಂದಿರ ದಿನಾಚರಣೆ ಅಂಗವಾಗಿ ಗುರುವಾರ ಆಯೋಜಿಸಿದ್ದ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ನಮ್ಮ ದೇಶ ಅತ್ಯಂತ ಹೆಚ್ಚು ಅರಣ್ಯ ಪ್ರದೇಶವನ್ನು ಒಳಗೊಂಡಿದ್ದು, ಸರ್ಕಾರ ಮತ್ತು ಅರಣ್ಯ ಇಲಾಖೆ ಹಸಿರೀಕರಣ ಮಾಡಲು ಮುಂದಾಗಿದೆ. ಇತ್ತೀಚೆಗೆ ಸಸ್ಯಶ್ಯಾಮಲಾ ಎಂಬ ಕಾರ್ಯಕ್ರಮದ ಮೂಲಕ ಶಾಲಾ ಕಾಲೇಜುಗಳ ಆವರಣದಲ್ಲಿ ಗಿಡಗಳನ್ನು ನೆಡಲಾಗಿದೆ. ನಮ್ಮ ಜಿಲ್ಲೆಯಲ್ಲಿ 2000 ಗಿಡಗಳನ್ನು ನೆಟ್ಟು ಬೆಳೆಸಲು ಪ್ರೋತ್ಸಾಹಿಸಿದ್ದೇವೆ. ಈ ನಿಟ್ಟಿನಲ್ಲಿ ತಾಯಿ ಹೆಸರಿನಲ್ಲಿ ಗಿಡ ನೆಡುವುದು ಅತ್ಯಂತ ಮಹತ್ವವಾದ ಕಾರ್ಯಕ್ರಮವಾಗಿದೆ ಎಂದು ತಿಳಿಸಿದರು.

ಒಂದು ಗಿಡವನ್ನು ನೆಟ್ಟರೇ ಅದು ಮರವಾಗಿ ನೂರಾರು ವರ್ಷಗಳ ಕಾಲ ಮನುಷ್ಯನಿಗೆ ನೆರವಾಗುತ್ತದೆ. ಒಂದು ಮರದಷ್ಟೇ ತಾಯಿಯೂ ಕೂಡ ಕುಟುಂಬಕ್ಕೆ ನೆರವಾಗುತ್ತಾಳೆ. ಪರಿಸರ ಸಂರಕ್ಷಣೆ ಮಾಡುವುದು ಹಾಗೂ ನಮ್ಮ ತಾಯಿಯನ್ನು ನೆನಪು ಮಾಡಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು ಎಂದರು.

ಚಾಮರಾಜನಗರ-ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮ್ಮದ್ ಅಸ್ಗರ್ (ಮುನ್ನಾ) ಮಾತನಾಡಿ, ಜಿಲ್ಲೆಯಲ್ಲಿ ಶೇ.50 ಕ್ಕಿಂತಲೂ ಹೆಚ್ಚು ಅರಣ್ಯ ಪ್ರದೇಶವನ್ನು ಹೊಂದಿದೆ. ಅದಾಗ್ಯೂ ನಗರ ಪ್ರದೇಶದಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಗಿಡಗಳನ್ನು ನೆಡಬೇಕಾಗಿದೆ. ಒಂದು ಕುಟುಂಬದ ನಿರ್ವಹಣೆಯಲ್ಲಿ ತಾಯಿಯೊಬ್ಬಳ ಮಹತ್ವ ದೊಡ್ಡದಾಗಿದೆ. ಅವಳ ಹೆಸರಿನಲ್ಲಿ ಗಿಡಗಳನ್ನು ನೆಡುತ್ತಿರುವುದು ಉತ್ತಮ ಕಾರ್ಯಕ್ರಮವಾಗಿದೆ ಎಂದರು.

ಈ ಸಂದರ್ಭದಲ್ಲಿ ಜೈ ಭುವನೇಶ್ವರಿ ಕನ್ನಡ ಯುವ ವೇದಿಕೆ ಅಧ್ಯಕ್ಷ ಜಿ.ಬಂಗಾರು, ನೆಹರು ಕೇಂದ್ರದ ಸಹನಾ, ಪ್ರಾಂಶುಪಾಲ ಎಂ.ಸೋಮಣ್ಣ, ಉಪನ್ಯಾಸರಾದ ಟಿ.ಮಧು, ಸಚ್ಚಿಂದ್ರನಾಗ್, ಎಂ.ರಾಜೇಂದ್ರ, ಪ್ರೇಮ, ರಾಜೇಶ್ವರಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net