

ಯಾದಗಿರಿ: ಮಗು ತಾಯಿಯ ಗರ್ಭದಲ್ಲಿರುವಾಗ ಯಾವುದೇ ರೀತಿಯ ಸೋಂಕು ತಗುಲದಂತೆ ಸುರಕ್ಷಿತವಾಗಿರುತ್ತದೆ. ಜನಿಸಿದ ಮೇಲೆ ಅದರ ಆರೋಗ್ಯ ಗಟ್ಟಿಯಾಗಲು ತಾಯಿಯ ಹಾಲು ಸಂಜೀವಿನಿಗೆ ಸಮವಾಗಿರುತ್ತದೆ ಎಂದು ಜಿಲ್ಲಾ ಮಲೇರಿಯಾ ನಿಯಂತ್ರಣಾಕಾರಿ ಡಾ.ಲಕ್ಷ್ಮೀಕಾಂತ್ ಒಂಟಿಪೀರ ತಿಳಿಸಿದರು.
ಗುರುವಾರ ನಗರದ ಹಳೇ ಜಿಲ್ಲಾಸ್ಪತ್ರೆಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಆರೋಗ್ಯ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸ್ತನ್ಯಪಾನ ತಾಯಿ ಹಾಗೂ ಮಗುವಿನ ಆರೋಗ್ಯದ ಹಿತದೃಷ್ಠಿಯಿಂದ ಬಹುಮುಖ್ಯವಾಗಿದೆ. ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ತುಂಬಾ ಅವಶ್ಯಕವಾಗಿದೆ ಎಂದರು.
ಆರ್ಸಿಎಚ್ಒ ಡಾ.ಮಲಪ್ಪ ಮಾತನಾಡಿ ಸ್ತನ್ಯಪಾನ ಮಕ್ಕಳಿಗೆ ಸಾಕಷ್ಟು ಸೊಂಕುಗಳನ್ನು ತಡೆಯುತ್ತದೆ. ಅತಿಸಾರ ಭೇದಿಯಿಂದ ಮಗುವನ್ನು ರಕ್ಷಿಸುತ್ತದೆ, ಮಗು ಜನಿಸಿದ 1 ಗಂಟೆಯ ಒಳಗಾಗಿ ಗಿಣ್ಣದ ಹಾಲು ಕುಡಿಸಬೇಕು, 6 ತಿಂಗಳ ತನಕ ಸ್ತನ್ಯಪಾನ ಹೊರತುಪಡಿಸಿ ಇತರೆ ಆಹಾರ ಕೊಡಬಾರದು ಎಂದು ಸಲಹೆ ನೀಡಿದರು.
ಮಕ್ಕಳತಜ್ಞ ಡಾ.ಸಚೀನ್ ಮಾತನಾಡಿ, ನವಜಾತ ಶಿಶುವಿನ ಬೆಳವಣಿಗೆಯ ಪ್ರಯಾಣದಲ್ಲಿ ಸ್ತನ್ಯಪಾನವು ಅತ್ಯಂತ ಅವಶ್ಯಕ ಭಾಗವಾಗಿದೆ. ಮಗು ತನ್ನ ತಾಯಿಯ ಎದೆಹಾಲಿನ ಸೇವನೆಯಿಂದ ರೋಗಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಪಡೆಯುತ್ತದೆ. ಜತೆಗೆ ಸ್ತನ್ಯಪಾನದಿಂದ ಹಲವಾರು ಆರೋಗ್ಯ ಪ್ರಯೋಜನಗಳು ತಾಯಿ ಮತ್ತು ಮಗು ಇಬ್ಬರಿಗೂ ಲಭಿಸುತ್ತದೆ. ಆದ್ದರಿಂದಲೇ ತಾಯಿ ಎದೆಹಾಲು ಅಮೃತವಿದ್ದಂತೆ ಎಂದು ಹೇಳಲಾಗುತ್ತದೆ ಎಂದು ವಿವರಿಸಿದರು.
ತಾಲೂಕು ಆರೋಗ್ಯಾಕಾರಿ ಡಾ.ಹಣಮಂತರೆಡ್ಡಿ, ಜಿಲ್ಲಾ ಸರ್ಜನ್ ಡಾ.ರಾಮನಗೌಡ, ವೈದ್ಯಾಕಾರಿಗಳಾದ ಡಾ.ವರ್ಧಮಾನ್, ಡಾ.ವಿನೂತಾ, ಜಿಲ್ಲಾ ಆರೋಗ್ಯ ಶಿಕ್ಷಣಾಕಾರಿ ತುಳಸಿರಾಮ, ಎಚ್.ಎಸ್.ಶಾಂತಿಲಾಲ್, ಸುದರ್ಶನ್, ಸವಿತಾ ಇದ್ದರು.