ತಾಯಿಯ ಎದೆ ಹಾಲು ಖರ್ಚಿಲ್ಲದೆ ಸಿಗುವ ರೋಗನಿರೋಧಕ ಶಕ್ತಿ

ತಾಯಿಯ ಎದೆ ಹಾಲು ಖರ್ಚಿಲ್ಲದೆ ಸಿಗುವ ರೋಗನಿರೋಧಕ ಶಕ್ತಿ
Published on

ಹಾಸನ: ತಾಯಿಯ ಎದೆ ಹಾಲು ಯಾವ ಖರ್ಚಿಲ್ಲದೆ ಸುಲಭವಾಗಿ ಸಿಗುವಂತಹ ರೋಗನಿರೋಧಕ ಶಕ್ತಿಯನ್ನು ಹೊಂದಿರುವ ಆರೋಗ್ಯ ಪೂರ್ಣ ಆಹಾರ, ಇದರ ಬಗ್ಗೆ ಇಲಾಖೆಯ ಸಿಬ್ಬಂದಿಗಳು ಹೆಚ್ಚು ಹೆಚ್ಚು ಅರಿವನ್ನು ಮೂಡಿಸಬೇಕೆಂದು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ. ಶಿವಸ್ವಾಮಿ ತಿಳಿಸಿದರು.

ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮಕ್ಕಳ ವಿಭಾಗದವತಿಯಿಂದ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ, ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಗುವಿನ ಬೆಳವಣಿಗೆಗೆ ಪೂರಕವಾದ ಸಮತೋಲನವಾದ ಪೌಷ್ಟಿಕಾಂಶವನ್ನು ತಾಯಿಯ ಹಾಲು ಹೊಂದಿರುವುದರಿಂದ ಮಗುವಿಗೆ ಆರು ತಿಂಗಳ ತನಕ ಕೇವಲ ತಾಯಿಯ ಹಾಲನ್ನಷ್ಟೇ ನೀಡಬಹುದಾಗಿದೆ.ಆರು ತಿಂಗಳ ನಂತರ ಇತರೆ ಪೂರಕ ಆಹಾರವನ್ನು ನೀಡಬಹುದಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಮಾತನಾಡಿದ ಹಿಮ್ಸ್ ನಿರ್ದೇಶಕ ಡಾ.ರವಿಕುಮಾರ್ ಅವರು, ಸ್ತನ್ಯಪಾನದ ಮಹತ್ವವನ್ನು ವಿವರಿಸಿದರು ಹಾಗೂ ಎದೆ ಹಾಲಿನ ಬ್ಯಾಂಕ್‌ನ ಸದುಪಯೋಗ ಪಡೆದುಕೊಳ್ಳುವಂತೆ ಮತ್ತು ಎದೆ ಹಾಲಿನ ಸಂಗ್ರಹಣೆಗೆ ಕೈಜೋಡಿಸಲು ಮನವಿ ಮಾಡಿದರು.

ಮಕ್ಕಳ ತಜ್ಞ ಡಾ. ದೀಪ್ತಿಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ದೈವದತ್ತವಾಗಿ ಬಂದ ಎದೆ ಹಾಲು ತಾಯಂದಿರಿಗೆ ವರದಾನವಾಗಿದ್ದು, ಎಲ್ಲಾ ತಾಯಂದಿರು ಮಕ್ಕಳಿಗೆ ಆರು ತಿಂಗಳವರೆಗೆ ಎದೆ ಹಾಲುನ್ನು ಮಾತ್ರ ಕುಡಿಸುವುದು ಮತ್ತು 2 ವರ್ಷದವರೆಗೆ ಎದೆ ಹಾಲಿನ ಜೊತೆಗೆ ಪೂರಕ ಆಹಾರವನ್ನು ಕೊಡಬೇಕು ಎಂದರು.

ಸಮುದಾಯದಲ್ಲಿ ತಾಯಂದಿರಿಗೆ ಇರುವ ಮೌಢ್ಯವನ್ನು ತೊಡೆದು ಹಾಕಿ ಆರೋಗ್ಯದ ಅರಿವನ್ನು ಮೂಡಿಸುವುದೇ ಈ ಸಪ್ತಾಹವನ್ನು ಆಚರಣೆಯ ಮುಖ್ಯ ಗುರಿಯಾಗಿದೆ. ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಎದೆ ಹಾಲಿನ ಬ್ಯಾಂಕ್ ಅನ್ನು ತೆರೆಯಲಾಗಿದ್ದು, ದಿನಕ್ಕೆ ಸುಮಾರು 40 ಮಕ್ಕಳಿಗೆ ಅಗತ್ಯವಿರುವ ಹಾಲನ್ನು ಸಂಗ್ರಹಿಸಲಾಗಿದೆ, ಪ್ರತಿಯೊಬ್ಬ ತಾಯಿ ಕೂಡ ತಮ್ಮ ಮಗುವಿಗೆ ಆಗತ್ಯಕ್ಕಿಂತ ಹೆಚ್ಚು ಹಾಲು ಇದ್ದಲ್ಲಿ ಅವಶ್ಯವಾಗಿ ಎದೆ ಹಾಲಿನ ಬ್ಯಾಂಕ್‌ಗೆ ರಕ್ತದಾನ ಮಾಡುವ ತರಹ ಹಾಲಿನ ದಾನ ಮಾಡಬೇಕಾಗಿ ಮನವಿ ಮಾಡಿದರು.

ಮಕ್ಕಳ ವಿಭಾಗದ ವೈದ್ಯರು ಕಿರುನಾಟಕವನ್ನು ಪ್ರದರ್ಶಿಸಿ, ಹಾಡಿನ ಮೂಲಕ ಎದೆ ಹಾಲಿನ ಮಹತ್ವದ ಕುರಿತು ತಾಯಂದಿರಿಗೆ ಸಂದೇಶ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಹೆಚ್.ಸಿ.ಚೇತನ್ , ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಬಿ.ಎಂ. ವಿಜಯ್, ಡಾ. ಕುಮಾರ್, ಡಾ. ಮನುಪ್ರಕಾಶ್, ವೈದ್ಯಾಧಿಕಾರಿಗಳಾದ ಡಾ.ಶ್ರೀಧರ್, ಡಾ. ಜಿ.ಪ್ರವೀಣ್, ನರ್ಸಿಂಗ್ ಸೂಪರಿಂಟೆಂಡೆಂಟ್ ವಿಮಲಕುಮಾರಿ ಸೇರಿದಂತೆ ಇತರರು ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net