ತಾಯಿಯ ಅಂತ್ಯ ಸಂಸ್ಕಾರಕ್ಕೆ ಬಹಿಷ್ಕಾರ!

8 lxr 3
Published on

ಲಕ್ಷ್ಮೇಶ್ವರ: ಅಕ್ರಮ ಮದ್ಯ ಮಾರಾಟವನ್ನು ವಿರೋಧಿಸಿದ ಯೋಧ ಬಾಬಣ್ಣ ಅವರ ತಾಯಿ ಸಕ್ರವ್ವ ತಿಪ್ಪಣ್ಣ ಲಮಾಣಿ (70) ಅವರ ಅಂತ್ಯ ಸಂಸ್ಕಾರಕ್ಕೆ ಯಾರೂ ಹೋಗಬಾರದು. ಹೋದವರಿಗೆ 10 ಸಾವಿರ ರೂ. ದಂಡ ಹಾಕಲಾಗುವುದು ಎಂದು ನಿಷೇಧ ಹೇರಿದ ಘಟನೆ ಸಮೀಪದ ಉಳ್ಳಟ್ಟಿ ತಾಂಡಾದಲ್ಲಿ ಶುಕ್ರವಾರ ನಡೆದಿದೆ.

ತಾಂಡಾ ಜನರ ನಿರ್ಧಾರದ ಕುರಿತು ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪಿಎಸ್​ಐ ಶಿವಯೋಗಿ ಲೋಹಾರ, ಪ್ರೊಬೇಷನರಿ ಪಿಎಸ್​ಐ ಎಂ.ಎಸ್. ಕಾರಜೋಳ ಅವರು ತಾಂಡಾದ ಹಿರಿಯರ ಸಭೆ ನಡೆಸಿದರು. ಸಾವಿನ ಮನೆಯಲ್ಲಿ ಹಗೆ ಸಾಧಿಸುವುದು ಸರಿಯಲ್ಲ. ಅಂತ್ಯಕ್ರಿಯೆ ಮುಗಿದ ನಂತರ ಈ ಕುರಿತು ಪರಸ್ಪರರು ಸೌಹಾರ್ದದಿಂದ ಸಮಸ್ಯೆ ಬಗೆಹರಿಸಿಕೊಳ್ಳಿ. ಎಲ್ಲರೂ ಸೇರಿ ಅಂತ್ಯಕ್ರಿಯೆ ಪೂರ್ಣಗೊಳಿಸಿ ಎಂದು ಬುದ್ಧಿವಾದ ಹೇಳಿದರು. ಇದಕ್ಕೆ ಒಪ್ಪಿದ ನಿವಾಸಿಗಳು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದರು. ಇದರಿಂದಾಗಿ ಪರಿಸ್ಥಿತಿ ತಿಳಿಗೊಂಡು ಪ್ರಕರಣ ಸುಖಾಂತ್ಯಗೊಂಡಿತು.

ಈ ಕುರಿತು ಯೋಧ ಬಾಬಣ್ಣ ಲಮಾಣಿ ಪ್ರತಿಕ್ರಿಯಿಸಿ, ‘ನಾನು ರಜೆ ಮೇಲೆ ಬಂದಿದ್ದೇನೆ. ತಾಂಡಾದಲ್ಲಿ ಅಕ್ರಮವಾಗಿ ಮದ್ಯ ಮಾರಲಾಗುತ್ತಿದೆ. ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದೇನೆ. ಇದರಿಂದ ಮದ್ಯ ಮಾರಾಟಗಾರರಿಗೆ ತೊಂದರೆ ಮತ್ತು ಹಾನಿಯಾಗಿದೆ. ಇದೇ ಕಾರಣದಿಂದ ಸಾವಿನ ಸಂದರ್ಭದಲ್ಲೂ ನನ್ನ ಮೇಲೆ ಹಗೆ ಸಾಧಿಸಲು ನನ್ನ ತಾಯಿಯ ಅಂತ್ಯಕ್ರಿಯೆಗೆ ಯಾರು ಹೋಗಬಾರದು. ಹೋದವರಿಗೆ 10 ಸಾವಿರ ರೂ. ದಂಡ ಹಾಕಲಾಗುವುದು ಎಂದು ಅಕ್ರಮ ಮದ್ಯ ಮಾರಾಟಕ್ಕೆ ಸಹಕಾರ ನೀಡುವ ಗ್ರಾಪಂ ಸದಸ್ಯ ಮತ್ತು ಕೆಲ ಪ್ರಮುಖರು ತಾಂಡಾ ಜನರಿಗೆ ಬೆದರಿಕೆ ಹಾಕಿದ್ದಾರೆ. ಇದರಿಂದಾಗಿ ನನ್ನ ತಾಯಿಯ ಅಂತ್ಯಕ್ರಿಯೆಗೆ ಯಾರೂ ಬರುತ್ತಿಲ್ಲ. ಅಕ್ರಮ ಮದ್ಯ ಮಾರಾಟ ಮಾಡುವುದನ್ನು ತಡೆದಿದ್ದು ತಪ್ಪಾ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ತಾಂಡಾದವರು, ‘ಯೋಧನ ಕುಟುಂಬದವರು ನವೊಂದಿಗೆ ಬೆರೆಯುವುದಿಲ್ಲ. ಇಲ್ಲಿನ ಜನರ ಸಾವು, ನೋವು, ಕಷ್ಟಗಳಿಗೆ ಸ್ಪಂದಿಸುವುದಿಲ್ಲ. ತಾಂಡಾದ ಜನರ ಹಿತದೃಷ್ಟಿಯಿಂದ ಕೆಲ ವಿಷಯಗಳನ್ನು ನಮ್ಮಲ್ಲಿಯೇ ಬಗೆಹರಿಸಿಕೊಳ್ಳಬೇಕಾಗುತ್ತದೆ. ಆದರೆ, ಇವರು ಯಾವುದಕ್ಕೂ ಸಹಕಾರ ನೀಡುವುದಿಲ್ಲ’ ಎಂದು ದೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net