ತಾಯಿ ಹುಲಿ ಹುಡುಕಾಟಕ್ಕಿಳಿದ ಭೀಮ, ಮಹೇಂದ್ರ

15Rajesh10
Published on

 ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ತನ್ನ ಮೂರು ಮರಿಗಳನ್ನು ಬಿಟ್ಟು ನಾಪತ್ತೆಯಾಗಿರುವ ತಾಯಿ ಹುಲಿ ಹುಡುಕಾಟಕ್ಕೆ ಭೀಮ, ಮಹೇಂದ್ರ ಕಾರ್ಯಾಚರಣೆಗಿಳಿದರು.

ತಾಲೂಕಿನ ಪುಣಜನೂರು-ಬೇಡಗುಳಿ ರಸ್ತೆಯ ಅರಣ್ಯ ಪ್ರದೇಶದಲ್ಲಿ ಸೋಮವಾರ ಸಿಬ್ಬಂದಿ ಗಸ್ತು ನಡೆಸುತ್ತಿದ್ದಾಗ ಮೂರು ಹುಲಿ ಮರಿಗಳು ಪತ್ತೆಯಾಗಿದ್ದವು. ಮಂಗಳವಾರ ಸುತ್ತಮುತ್ತ ತಾಯಿ ಹುಲಿಯ ಹುಡುಕಾಟ ನಡೆಸಿದಾಗ ಸುಳಿವು ಸಿಗಲಿಲ್ಲ. ಈ ಹಿನ್ನೆಲೆಯಲ್ಲಿ ಬುಧವಾರ ಪುಣಜನೂರು ಮೀಸಲು ಅರಣ್ಯದಲ್ಲಿ ತಿತಿಮತಿ ಸಾಕಾನೆ ಶಿಬಿರದ ಭೀಮ, ಬಳ್ಳೆ ಸಾಕಾನೆ ಶಿಬಿರದ ಮಹೇಂದ್ರ ಅರಣ್ಯದಲ್ಲಿ ಕೂಂಬಿಂಗ್ ನಡೆಸಿದವು.

ಹುಲಿಗಾಗಿ ಆನೆಗಳ ಹುಡುಕಾಟ: ತಾಯಿ ಹುಲಿಯ ಪತ್ತೆಗಾಗಿ ಭೀಮ ಮತ್ತು ಮಹೇಂದ್ರ ಅರಣ್ಯದಲ್ಲಿ ಹುಡುಕಾಟ ನಡೆಸಿದವು. ಕಾಡಿನ ಸುತ್ತಮುತ್ತ ನಡೆಸಿದ ಹುಡುಕಾಟದಲ್ಲಿ ಸಂಜೆಯಾದರೂ ತಾಯಿ ಹುಲಿಯ ಸುಳಿವು ಸಿಗಲಿಲ್ಲ. ಆದರೂ ಕಾರ್ಯಾಚರಣೆಯನ್ನು ಮುಂದುವರೆಸಲಾಯಿತು. ಸಾಕನೆಗಳಲ್ಲದೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಯೂ ಹುಲಿ ಹುಡುಕಾಟದ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿರು. ಹುಲಿಯ ಸುಳಿವು ಪತ್ತೆಗಾಗಿ ಕ್ಯಾಮರಾ ಅಳವಡಿಸಲಾಗಿದೆ.

ಪುನರ್ವಸತಿ ಕೇಂದ್ರಕ್ಕೆ ಮೂರು ಮರಿಗಳು

ತಾಯಿ ಹುಲಿ ಬಿಟ್ಟು ಹೋಗಿರುವ ಮೂರು ಹುಲಿ ಮರಿಗಳನ್ನು ಆರೋಗ್ಯದ ದೃಷ್ಟಿಯಿಂದ ಮೈಸೂರಿನ ಕೂರ್ಗಳ್ಳಿಯಲ್ಲಿರುವ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net