

ಶ್ರೀರಂಗಪಟ್ಟಣ: ತಾಯಿಯ ಹಾಲು ಹುಟ್ಟಿದ ಮಗುವಿಗೆ ಅಮೃತವಾಗಿದ್ದು, ಆ ಮಗುವಿನ ಆರೋಗ್ಯಕ್ಕೆ ಅದುವೆ ಪ್ರಕೃತಿಯ ಮೊದಲ ಲಸಿಕೆಯಾಗಿರುವ ಕಾರಣ ಎಲ್ಲ ತಾಯಂದಿರೂ ಹೆರಿಗೆಯಾದ ಒಂದು ಗಂಟೆ ಒಳಗಾಗಿ ಮಗುವಿಗೆ ಸ್ತನ್ಯಪಾನ ಮಾಡಿಸಬೇಕೆಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಬೆನ್ನೂರ ಸಲಹೆ ನೀಡಿದರು.
ತಾಲೂಕಿನ ಪಾಲಹಳ್ಳಿ ಗ್ರಾಮದ 7ನೇ ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಂಟಿಯಾಗಿ ಆಯೋಜಿಸಿದ್ದ ತಾಲೂಕು ಮಟ್ಟದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಾಯಿಯ ಪರಿಶುದ್ಧ ಹಾಗೂ ರೋಗಾಣು ರಹಿತವಾಗಿದ್ದು, ಮಗುವಿಗೆ ಯಾವುದೇ ರೋಗ ಬರದಂತೆ ಅನೇಕ ಸೋಂಕುಗಳಿಂದ ವಿಶೇಷವಾಗಿ ನ್ಯೂಮೋನಿಯಾ, ಅತಿಸಾರ ಭೇದಿಯಿಂದ ರಕ್ಷಣೆ ನೀಡಿ ತಡೆಗಟ್ಟುತ್ತದೆ. ಅಲ್ಲದೆ ತಾಯಿ ಮತ್ತು ಮಗುವಿನ ಮಧ್ಯ ಪ್ರೀತಿ, ಬಾಂಧವ್ಯ, ಮಮತೆ, ವಾತ್ಸಲ್ಯ ಹಾಗೂ ಕರುಣೆಗಳನ್ನು ಬೆಸೆಯುತ್ತದೆ. ಆದ್ದರಿಂದ ತಾಯಂದಿರು ಹೆರಿಗೆಯಾದ ಒಂದು ಗಂಟೆಯೊಳಗಾಗಿ ತಪ್ಪದೇ ಸ್ತನ್ಯಪಾನ ಮಾಡಿಸಬೇಕೆಂದರು.
ಅಂಗನವಾಡಿ ಮೇಲ್ವಿಚಾರಕಿ ಪುಷ್ಪಾವತಿ ಮಾತನಾಡಿ, ಮಗುವಿಗೆ 6 ತಿಂಗಳವರೆಗೆ ತಾಯಿಯ ಹಾಲು ಬಿಟ್ಟು ಬೇರೆ ಏನನ್ನು ಕೊಡಬಾರದು. ತಾಯಿಯ ಹಾಲು ಮಗುವಿಗಾಗಿ ಸಿದ್ಧಪಡಿಸಿದ ಆಹಾರವಾಗಿದ್ದು, 6 ತಿಂಗಳ ಬಳಿಕ ತಾಯಿಯ ಹಾಲಿನ ಜತೆ ಪೂರಕ ಆಹಾರ ಪ್ರಾರಂಭಿಸಬೇಕು. ಒಟ್ಟಾರೆ ಮಗು 2 ವರ್ಷ ಆಗುವವರೆಗೆ ಸಂಪೂರ್ಣ ತಾಯಿಯ ಹಾಲು ನೀಡಬೇಕು. ಇದರಿಂದ ಮಗುವಿಗೆ ಯಾವುದೇ ಕಾಯಿಲೆ ಬರುವುದಿಲ್ಲ ಜತೆಗೆ ಮಗು ಚುರುಕು ಮತ್ತು ಜಾಣ್ಮೆಯನ್ನು ಹೊಂದುತ್ತದೆ ಎಂದರು.
ಸಿಡಿಪಿಒ ಸಕಲೇಶ್ವರ ಮಾತನಾಡಿ, ಮಾತೃ ಪೂರ್ಣ ಯೋಜನೆ ಹಾಗೂ ಬಾಲ್ಯ ವಿವಾಹ ತಡೆಗೆಟ್ಟುವ ಕುರಿತು ಮಾತನಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮೀ, ಉಪಾಧ್ಯಕ್ಷೆ ಆಶಾ, ಸದಸ್ಯೆ ರೇಖಾ, ಕಾರ್ಯದರ್ಶಿ ಕುಸುಮಾ, ವೈದ್ಯಾಧಿಕಾರಿ ಡಾ.ಎಂ.ಗಿರೀಶ್, ಅಂಗನವಾಡಿ ಕಾರ್ಯಕರ್ತೆಯರಾದ ಕೆ.ಎಸ್. ವಿಜಯಾ, ಪುಷ್ಪಲತಾ, ಶೋಭಾ, ಹೇಮಲತಾ, ಮಾರ್ಗರೇಟ್ ಮೇರಿ, ಅನಿತಾ, ಅಂಬಿಕಲಾ, ಗಾಯತ್ರಿ, ಮಂಜುಳಾ ಹಾಗೂ ಗರ್ಭಿಣಿಯರು, ಬಾಣಂತಿಯರು, ಮಕ್ಕಳ ಪೋಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.