

ಭಾಲ್ಕಿ: ಮಗುವಿಗೆ ತಾಯಿ ಹಾಲು ಉಣಿಸುವುದರಿಂದ ಆರೋಗ್ಯಕರ ದೇಹ ನಿರ್ಮಾಣವಾಗುತ್ತದೆ ಎಂದು ಡಾ.ಶಿಲ್ಪಾ ದೇವಪ್ಪ ಹೇಳಿದರು.
ಪಟ್ಟಣದ ಶ್ರೀ ಸತ್ಯ ಸಾಯಿ ಪಬ್ಲಿಕ್ ಶಾಲೆಯಲ್ಲಿ ತಾಲೂಕು ರೋಟರಿ ಕ್ಲಬ್ ಆಫ್ ಭಾಲ್ಕಿ ಮಾಂಜರಾದಿಂದ ಬುಧವಾರ ಹಮ್ಮಿಕೊಂಡ ವಿಶ್ವ ಸ್ತನ್ಯಪಾನ ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿ, ಇತ್ತೀಚೆಗೆ ತಾಯಂದಿರಿಗೆ ಮಾಹಿತಿ ಕೊರತೆ ಇರುವುದರಿಂದ ಹಾಲು ಉಣಿಸುವುದು ಕಡಿಮೆ ಆಗಿದೆ. ಹಾಲು ಕುಡಿಸುವುದರಿಂದ ಸೌಂದರ್ಯಕ್ಕೆ ಧಕ್ಕೆ ಬರುತ್ತದೆ ಎಂಬ ತಪ್ಪು ಕಲ್ಪನೆಯಿಂದ ದೂರಾಗಬೇಕು ಎಂದರು.
ಭವಿಷ್ಯದಲ್ಲಿ ಬರುವ ರೋಗಗಳನ್ನು ನಿಯಂತ್ರಿಸುವ ಶಕ್ತಿ ತಾಯಿ ಹಾಲಿಗಿದೆ. ಹುಟ್ಟಿದ ಆರು ತಿಂಗಳವರೆಗೆ ತಾಯಿ ಹಾಲು ಕುಡಿಸಬೇಕು. ತಾಯಿ ಹಾಲಿನಲ್ಲಿ ಕ್ಯಾನ್ಸರ್ ಬರದಂತೆ ತಡೆಯುವ ಶಕ್ತಿಯಿದೆ. ಪೌಷ್ಠಿಕಾಂಶ ಇರುವುದರಿಂದ ಅಮೃತಕ್ಕೆ ಸಮನಾಗಿರುತ್ತದೆ. ಗರಿಷ್ಠ ಎರಡು ವರ್ಷ ತಾಯಿ ಹಾಲು ಕುಡಿಸಬೇಕು ಎಂದು ಸಲಹೆ ನೀಡಿದರು.
ರೋಟರಿ ಕ್ಲಬ್ ಆಫ್ ಭಾಲ್ಕಿ ಮಾಂಜರಾ ಅಧ್ಯಕ್ಷ ಚಂದ್ರಶೇಖರ ಎಮ್ಮೆ ಮಾತನಾಡಿ, ಸಮಾಜ ಉಪಯೋಗಿ ಕಾರ್ಯಕ್ರಮ ಹಮ್ಮಿಕೊಂಡು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಎಲ್ಲರಿಂದ ಆಗಬೇಕು ಎಂದರು.
ಕ್ಲಬ್ ಕಾರ್ಯದರ್ಶಿ ಜಗದೀಶ ಖಂಡ್ರೆ ಮಾತನಾಡಿದರು. ನ್ಯಾಯವಾದಿ ಶಿವಕುಮಾರ ಕೇರೂರೆ, ರಾಜಕುಮಾರ ಮಾಶೆಟ್ಟೆ, ವಿಜಯಕುಮಾರ ಸುಲಗುಂಟೆ, ವಿಜಯಕುಮಾರ ಹುಣಸನಾಳೆ, ರಾಜು ಭೋಸ್ಲೆ, ಜೈಕಾಂತ ಗಂಗೋಜಿ, ರಾಜಕುಮಾರ ಹೊಸದೊಡ್ಡೆ, ಚಂದ್ರಕಾಂತ ಚಂಡಕಾಪುರೆ ಇತರರಿದ್ದರು. ಪ್ರಾಚಾರ್ಯ ನಿರ್ಮಲಾ ತಿವಾರಿ ನಿರೂಪಣೆ ಮಾಡಿದರು. ಸಂಸ್ಥೆ ಕಾರ್ಯದರ್ಶಿ ಜ್ಯೋತಿ ಎಮ್ಮೆ ವಂದಿಸಿದರು.