

ಹಾಸನ: ತಾಯಿ ಮತ್ತು ಶಿಶು ಮರಣ ತಡೆಗಟ್ಟಲು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಬಿ.ಸಿ.ರಾಯ್ ಸಭಾಂಗಣದಲ್ಲಿ ಸೋಮವಾರ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾತನಾಡಿದ ಅವರು, ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಮುತುವರ್ಜಿ ವಹಿಸಿ. ಪ್ರತಿ ತಿಂಗಳು ಗರ್ಭಿಣಿಯರ ಆರೋಗ್ಯ ತಪಾಸಣೆ ಮಾಡುವ ಸಂದರ್ಭದಲ್ಲಿ ಆರೋಗ್ಯ ಸ್ಥಿತಿಯಲ್ಲಿ ಯಾವುದೇ ನ್ಯೂನತೆಗಳು ಕಂಡು ಬಂದಲ್ಲಿ ಸೂಕ್ತ ಪರೀಕ್ಷೆ ಮಾಡಿಸಿ, ಅಗತ್ಯ ಚಿಕಿತ್ಸೆ ನೀಡುವುದರ ಮೂಲಕ ತಾಯಿ ಮತ್ತು ಮಗುವಿನ ಆರೋಗ್ಯ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಮಕ್ಕಳ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿ ನಿಗದಿತ ಅವಧಿಯಲ್ಲಿ ಮಕ್ಕಳಿಗೆ ಲಸಿಕೆ ತಪ್ಪದಂತೆ ಹಾಕಲು ಕ್ರಮ ವಹಿಸಿ ಎಂದರಲ್ಲದೆ, ಲಸಿಕೆ ನೀಡಿರುವ ಬಗ್ಗೆ ತಾಯಿ ಕಾರ್ಡ್‌ನಲ್ಲಿ ನಮೂದಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಿ. ಈಗಾಗಲೇ ಎರಡು ಮಕ್ಕಳನ್ನು ಹೊಂದಿರುವ ತಾಯಂದಿರಿಗೆ ಮತ್ತು ಅವರ ಕುಟುಂಬದವರಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳವ ಬಗ್ಗೆ ಆಶಾ ಕಾರ್ಯಕರ್ತೆಯರು ಜಾಗೃತಿ ಮೂಡಿಸುವಂತೆ ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶಿವಸ್ವಾಮಿ, ಆರ್‌ಸಿಎಚ್ ಅಧಿಕಾರಿ ಡಾ. ಚೇತನ್, ಹಿಮ್ಸ್ ಪ್ರಸೂತಿ ತಜ್ಞರಾದ ಡಾ.ಸುಧಾ, ಡಾ.ಮಂಜುನಾಥ್, ಮಕ್ಕಳ ತಜ್ಞರಾದ ಡಾ.ಶ್ರೀನಿವಾಸ್, ಡಾ. ಮನುಕುಮಾರ್, ಡಾ.ಕುಮಾರ್, ಡಾ.ಭಾರತಿ ರಾಜಶೇಖರ್, ಡಾ. ಸಾವಿತ್ರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಅಧಿಕಾರಿ ಡಾ. ಹರೀಶ್, ಆರೋಗ್ಯ ಇಲಾಖೆ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.