

ಚಿತ್ರದುರ್ಗ: ಆರೋಗ್ಯ ಇಲಾಖೆಯ‘ಕಿಲ್ಕಾರಿ’ ಮೊಬೈಲ್ ಆಧಾರಿತ ಆರೋಗ್ಯ ಸಲಹಾ ಸೇವೆ ತಾಯಿ, ಶಿಶುಗಳ ಆರೋಗ್ಯ ರಕ್ಷಣೆಗೆ ನೆರವಾಗಲಿದೆ ಎಂದು ಜಿಪಂ ಸಿಇಒ ಎಸ್.ಜೆ. ಸೋಮಶೇಖರ್ ಹೇಳಿದರು.
ಜಿಲ್ಲಾ ಪಂಚಾಯಿತಿಯಲ್ಲಿ ಮಂಗಳವಾರ ಜಿಲ್ಲಾ ಮಟ್ಟದ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿ, ಆಡಿಯೋ ಆರೋಗ್ಯ ಸಲಹೆಗಳನ್ನು ಒಳಗೊಂಡಿರುವ ಈ ಯೋಜನೆ ತಾಯಿ, ಶಿಶು ಮರಣ ನಿಯಂತ್ರಿಸಲು, ಗರ್ಭಿಣಿ, ತಾಯಂದಿರ ಹಾಗೂ ಮಕ್ಕಳ ಅಪೌಷ್ಟಿಕತೆ ಹೋಗಲಾಡಿಸಲು ಮತ್ತು ಮಕ್ಕಳ ಲಸಿಕಾ ಪ್ರಮಾಣ ಶೇ.100 ಗುರಿ ಸಾಧನೆಗೆ ಪೂರಕವಾಗಿದೆ ಎಂದರು.
ತಾಯಂದಿರಿಗೆ ಮೊಬೈಲ್ ಮೂಲಕ ಮಾಹಿತಿ ಶಿಕ್ಷಣ ಒದಗಿಸುವ ಈ ಯೋಜನೆ ಆಡಿಯೋ ಸಂದೇಶಗಳನ್ನು ಅಂಗನವಾಡಿ ಕೇಂದ್ರ ವ್ಯಾಪ್ತಿಯ ಎಲ್ಲ ಗರ್ಭಿಣಿಯರು ಆಲಿಸುವಂತೆ ಆಶಾ ಕಾರ್ಯಕರ್ತೆಯರು ನಿಗಾ ವಹಿಸಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿಗಳೊಂದಿಗೆ ಯೋಜನೆ ಅನುಷ್ಠಾನಕ್ಕೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸಹಕರಿಸಬೇಕು ಎಂದು ತಿಳಿಸಿದರು.
ಡಿಎಚ್‌ಒ ಡಾ.ಜಿ.ಪಿ. ರೇಣುಪ್ರಸಾದ್ ಮಾತನಾಡಿ, ಜಿಲ್ಲೆಯಲ್ಲಿ ಈವರೆಗೆ ಆರ್‌ಸಿಎಚ್ ಪೋರ್ಟಲ್‌ನಲ್ಲಿ ನೋಂದಾಯಿತ 12015 ಗರ್ಭಿಣಿಯರು, 26100 ಒಂದು ವರ್ಷದೊಳಗಿನ ಮಕ್ಕಳ ತಾಯಂದಿರು ಕಿಲ್ಕಾರಿ ಯೋಜನೆ ಫಲಾನುಭವಿಗಳಾಗಿದ್ದಾರೆ. ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಿಲ್ಕಾರಿ ಕರೆ ಬಂದಾಗ ಸ್ವೀಕರಿಸಿ ಗರ್ಭಿಣಿ, ಬಾಣಂತಿ, ಮಕ್ಕಳ ಆರೈಕೆ, ಪೌಷ್ಟಿಕ ಆಹಾರ, ಲಸಿಕಾ ವೇಳಾಪಟ್ಟಿಯ ಮಾಹಿತಿ ನೀಡಲಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಡಿ.ಎಂ. ಅಭಿನವ್ ಮಾತನಾಡಿ, ಮೊಬೈಲ್ ಆಧಾರಿತ ಈ ಯೋಜನೆ ಡಿಜಿಟಲ್ ಇಂಡಿಯಾದ ಭಾಗವಾಗಿ ಹೊಸ ಮತ್ತು ಹಾಲಿ ಗರ್ಭಿಣಿಯರಿಗಾಗಿ 2016ರ ಜನವರಿ15ರಿಂದ ಪ್ರಾರಂಭವಾಗಿದೆ. ತಾಯಂದಿರಿಗೆ ಪ್ರಮುಖ ಆರೋಗ್ಯ ಮಾಹಿತಿಯನ್ನು ನೇರವಾಗಿ ತಲುಪಿಸಲು ಮೊಬೈಲ್ ತಂತ್ರಜ್ಞಾನ ಬಳಸಿಕೊಳ್ಳಲಾಗಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಭಾರತಿ ಆರ್. ಬಣಕಾರ್, ಕುಟುಂಬ ಯೋಜನಾಧಿಕಾರಿ ಡಾ. ರೇಖಾ, ಹೊಸದುರ್ಗ ತಾಲೂಕು ಆರೋಗ್ಯಾಧಿಕಾರಿ ಡಾ. ರಾಘವೇಂದ್ರಪ್ರಸಾದ್, ಮೊಳಕಾಲ್ಮೂರು ತಾಲೂಕು ಆರೋಗ್ಯಾಧಿಕಾರಿ ಡಾ. ಮಧುಕುಮಾರ್, ಪ್ರಫುಲ್ಲ, ವೀರೇಂದ್ರ ಪಾಟೀಲ್, ಬಿ. ಜಾನಕಿ, ಪೂರ್ಣಿಮಾ, ಅರ್ಜುನ್, ದಸ್ತಗೀರ್‌ಸಾಬ್, ಮಂಜುನಾಥ್ ಇತರರು ಇದ್ದರು.