

ವಿಜಯವಾಣಿ ಸುದ್ದಿಜಾಲ ಧಾರವಾಡ
ತಾಯಿ ರಕ್ಷಣೆ ಪ್ರತಿಯೊಬ್ಬ ಮಗನ ಕರ್ತವ್ಯ. ಮನುಷ್ಯಲೋಕ ತನ್ನೊಳಗೆ ತುಂಬಿಕೊಂಡಿರುವ ಆದರ್ಶ ಮೌಲ್ಯಗಳ ಒಟ್ಟು ಮೊತ್ತವೇ ತಾಯಿ ಎಂದು ದಾಂಡೇಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ ಎಂ.ಡಿ. ಒಕ್ಕುಂದ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಶ್ರೀಮತಿ ಚನ್ನಮ್ಮ ಬಸಲಿಂಗಪ್ಪ ಹೊಸಕೋಟಿ ದತ್ತಿ ಅಂಗವಾಗಿ ತಾಯಿ ಸ್ಮರಣೆ ನಿಮಿತ್ತ ಸೋಮವಾರ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ತಾಯಿತನದ ಆಯಾಮಗಳು ಕುರಿತು ಮಾತನಾಡಿದರು.
ಪ್ರತಿ ಮಗುವಿನ ಅಂತರಂಗವನ್ನು ತಾಯಿ ಆವರಿಸಿರುತ್ತಾಳೆ. ತಾಯಿ ಅಂದಾಕ್ಷಣ ಮನುಷ್ಯ ಭಾವುಕನಾಗುವುದು ಏಕೆ?. ತಾಯಿತನ ಎನ್ನುವುದು ಗರ್ಭಕ್ಕೆ ಮಾತ್ರ ಸಂಬಂಧಿಸಿದ್ದೆ, ತಾಯಿತನದ ಭಾವನೆ ಪುರುಷರಲ್ಲೂ ಇರುವುದನ್ನು ಕಾಣಬಹುದು. ಮನುಷ್ಯ ವಯಸ್ಸಾದಂತೆ ತಾಯಿ ಬಗ್ಗೆ ಹೆಚ್ಚೆಚ್ಚು ನೆನಪಿಸಿಕೊಳ್ಳುತ್ತಾನೆ. ಬಡತನ ಉಂಡು ಬೆಳೆದ ತಾಯಿಯಲ್ಲಿ ನಿಸ್ವಾರ್ಥ ಭಾವ ಅಡಗಿರುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಉಪಾಧ್ಯಕ್ಷೆ ಪ್ರೊ. ಮಾಲತಿ ಪಟ್ಟಣಶೆಟ್ಟಿ ಮಾತನಾಡಿ, ರಾಷ್ಟ್ರವನ್ನು ಪ್ರೀತಿಸಿ ತಮ್ಮ ಜೀವನ ಮತ್ತು ಸ್ವಾರ್ಥವನ್ನು ತ್ಯಾಗ ಮಾಡಿದ ಪುರುಷರೆಲ್ಲರಲ್ಲೂ ತಾಯಿತನ ಕಾಣುತ್ತೇವೆ. ಇವತ್ತಿನ ಮಕ್ಕಳಲ್ಲಿ ತಾಯಿ ಎಂದರೆ ತಾತ್ಸಾರ ಮನೋಭಾವ ಮೂಡುತ್ತಿರುವುದು ಕಳವಳಕಾರಿ ಸಂಗತಿ. ಪ್ರತಿಯೊಬ್ಬರೂ ತಾಯಿ ಬಗ್ಗೆ ಅಪಾರ ಪ್ರೀತಿ, ಗೌರವ, ಕಾಳಜಿ ಹೊಂದಿದಾಗ ಮಾತ್ರ ಜೀವನದಲ್ಲಿ ನೆಮ್ಮದಿ ಕಾಣಲು ಸಾಧ್ಯ ಎಂದರು.
ದತ್ತಿದಾನಿ ಪರ ಚೇತನ ಹೊಸಕೋಟಿ ಮಾತನಾಡಿದರು. ಚಂದ್ರಶೇಖರ ಅಮಿನಗಡ, ನಾರಾಯಣ ಕಾಮತ, ಹಿರೇಮಠ ಹಾಗೂ ಹೊಸಕೋಟಿ ಪರಿವಾರದವರು, ಇತರರು ಇದ್ದರು.
ಶಿವಾನಂದ ಭಾವಿಕಟ್ಟಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಜಿನದತ್ತ ಹಡಗಲಿ ನಿರೂಪಿಸಿದರು. ಡಾ. ಧನವಂತ ಹಾಜವಗೋಳ ವಂದಿಸಿದರು.