ತಾಯಿ ಮರಣ, ಶಿಶು ಮರಣ ಪ್ರಮಾಣಕ್ಕೆ ಕಡಿವಾಣ

CTD NEWS CEO....
Published on

ಚಿತ್ರದುರ್ಗ: ಆರೋಗ್ಯ ಇಲಾಖೆ ಉದ್ದೇಶ, ನಾನಾ ಕಾರ‌್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನದ ಮೂಲಕ ಜಿಲ್ಲೆಯಲ್ಲಿ ತಾಯಿ ಮರಣ ಹಾಗೂ ಶಿಶು ಮರಣ ಪ್ರಮಾಣ ತಗ್ಗಿಸಲು ಕ್ರಮ ವಹಿಸಬೇಕಿದೆ ಎಂದು ಜಿಪಂ ಸಿಇಒ ಎಸ್.ಜೆ.ಸೋಮಶೇಖರ್ ಹೇಳಿದರು.

ಜಿಲ್ಲಾಡಳಿತ, ಜಿಪಂ ಹಾಗೂ ಆರೋಗ್ಯ ಇಲಾಖೆಯಿಂದ ಗುಣಮಟ್ಟ ಪ್ರಸವಪೂರ್ವ ಆರೈಕೆ ಕುರಿತು ಸಮುದಾಯ ಆರೋಗ್ಯಾಧಿಕಾರಿಗಳಿಗೆ ಸೋಮವಾರ ಹಮ್ಮಿಕೊಂಡಿದ್ದ ಒಂದು ದಿನದ ಜಿಲ್ಲಾ ಮಟ್ಟದ ತರಬೇತಿ ಕಾರ‌್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಶೇ.100 ಸಾಂಸ್ಥಿಕ ಹೆರಿಗೆಗೆ ಒತ್ತು ನೀಡಬೇಕು. ಲಸಿಕೆ, ಸಂವಹನ ಹಾಗೂ ಆರೋಗ್ಯ ಇಲಾಖೆ ಮಾಹಿತಿ ಶಿಕ್ಷಣ ಕಾರ‌್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಮೂಲಕ ಪ್ರತಿಯೊಬ್ಬ ನಾಗರಿಕರಿಗೂ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವಂತಾಗಬೇಕೆಂದರು.

ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಅಭಿನವ್ ಮಾತನಾಡಿ, ಗರ್ಭಾವಸ್ಥೆ, ಶಿಶುವಿನ ಜನನ, ನಂತರ ಬಾಣಂತಿ ಆರೈಕೆಗೆ ಗುಣಮಟ್ಟದ ಪ್ರಸವಪೂರ್ವ ಆರೈಕೆ ಬಹಳ ಮುಖ್ಯವಾಗಲಿದೆ. ಮುಟ್ಟಿನ ಸಮಸ್ಯೆ, ರಕ್ತಹೀನತೆ, ಬಾಲ್ಯವಿವಾಹ ತಡೆಗಟ್ಟುವುದು ಸೇರಿದಂತೆ ಆರೋಗ್ಯ ಇಲಾಖೆ ಕಾರ‌್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸಿದಾಗ ತಾಯಿ ಮರಣ, ಶಿಶುವಿನ ಮರಣ ಸಂಖ್ಯೆಯನ್ನು ನಿಯಂತ್ರಿಸಲು ಸಾಧ್ಯವಾಗಲಿದೆ ಎಂದರು.

ಗರ್ಭಿಣಿಯರು 12 ನೇ ವಾರದೊಳಗೆ ಆರ್‌ಸಿಎಚ್ ತಂತ್ರಾಂಶದಲ್ಲಿ ನೋಂದಣಿಯಾಗಬೇಕು. ಇದರಿಂದ ಎಚ್‌ಬಿ, ಬಿಪಿ ಪರೀಕ್ಷೆ ಸಹಿತ ಗರ್ಭಿಣಿಯರ ಆರೋಗ್ಯವನ್ನು ಗಮನಿಸಿ ಚಿಕಿತ್ಸೆ ನೀಡಲಾಗುತ್ತದೆ, ಹೈರಿಸ್ಕ್ ಪ್ರೆಗ್ನೆನ್ಸಿ ಬಗ್ಗೆಯೂ ಹೆಚ್ಚಿನ ಗಮನ ಹರಿಸಬೇಕಿದೆ ಎಂದರು.

ಸಂಪನ್ಮೂಲ ವ್ಯಕ್ತಿಗಳಾದ ಡಾ.ಶಶಿಕಿರಣ್, ಡಾ.ಮೇಘನಾ, ಡಾ.ಮೇಘಾ ಯಾದವ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಚಂದ್ರಶೇಖರ್ ಕಂಬಾಳಿಮಠ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣನಾಯ್ಕ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಗೌರಮ್ಮ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net