ತಾಯಿ, ಮಗು ಮರಣ ಪ್ರಮಾಣ ಇಳಿಕೆ

prince2
Published on

ಅವಿನಾಶ್ ಜೈನಹಳ್ಳಿ ಮೈಸೂರು

ಮಹಾಮಾರಿ ಕರೊನಾ ಆರ್ಭಟದ ನಡುವೆಯೂ ತಾಯಿ, ಮಗುವಿನ ಮರಣ ಪ್ರಮಾಣ ಜಿಲ್ಲೆಯಲ್ಲಿ ಇಳಿಮುಖವಾಗುತ್ತಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ರೂಪಿಸಿರುವ ವಿವಿಧ ಯೋಜನೆಗಳ ಫಲವಾಗಿ ಮೈಸೂರು ಜಿಲ್ಲೆ ದೇಶಕ್ಕೆ ಮಾದರಿಯಾಗಿದೆ.

2019-20ನೇ ಸಾಲಿನಲ್ಲಿ ದೇಶದಲ್ಲಿ ಜನನವಾದ ಪ್ರತಿ ಸಾವಿರ ಶಿಶುಗಳ ಪೈಕಿ 34 ಹಾಗೂ ರಾಜ್ಯದಲ್ಲಿ 25 ಶಿಶುಗಳು ಮೃತಪಟ್ಟಿವೆ. ಆದರೆ, ಈ ಪ್ರಮಾಣ ಮೈಸೂರು ಜಿಲ್ಲೆಯಲ್ಲಿ 8.1ರಷ್ಟಿದೆ. ಈ ಸಾಲಿನಲ್ಲಿ ಹೆರಿಗೆ ಸಮಯದಲ್ಲಿ ದೇಶದಲ್ಲಿ ಲಕ್ಷ ತಾಯಂದಿಯರ ಪೈಕಿ 122 ಹಾಗೂ ರಾಜ್ಯದಲ್ಲಿ 97 ತಾಯಂದಿರು ಮೃತಪಟ್ಟಿದ್ದಾರೆ. ಆದರೆ, ಜಿಲ್ಲೆಯಲ್ಲಿ ಈ ಸಂಖ್ಯೆ 63.7 ಇದೆ. ಮರಣ ಪ್ರಮಾಣವನ್ನು ಮತ್ತಷ್ಟು ತಗ್ಗಿಸಲು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಜನನಿ ಶಿಶು ಸುರಕ್ಷಾ ಕಾರ್ಯಕ್ರಮ, ಜನನಿ ಸುರಕ್ಷಾ ಯೋಜನೆ, ನಗು-ಮಗು ಇನ್ನಿತರ ಯೋಜನೆಗಳು ಸಫಲವಾಗಿವೆ.

ತಾಯಂದಿರ ಮರಣ ಪ್ರಮಾಣವನ್ನು 2022ರ ವೇಳೆಗೆ 100ಕ್ಕೆ (1 ಲಕ್ಷ ತಾಯಂದಿರ ಪೈಕಿ) ಇಳಿಸಬೇಕೆಂಬುದು ಕೇಂದ್ರ ಸರ್ಕಾರದ ಗುರಿ. ಆದರೆ, ಮೈಸೂರು ಈಗಾಗಲೇ ಗುರಿ ಸಾಧನೆ ಮಾಡಿದೆ. ಜಿಲ್ಲೆಯಲ್ಲಿ ತಾಯಂದಿರ ಮರಣ ಪ್ರಮಾಣ ಈಗಾಗಲೇ 63ಕ್ಕೆ ಇಳಿಕೆಯಾಗಿದೆ. 2022ರ ವೇಳೆಗೆ ಈ ಪ್ರಮಾಣ ಮತ್ತಷ್ಟು ಇಳಿಯುವ ನಿರೀಕ್ಷೆ ಹೊಂದಲಾಗಿದೆ.

ದೇಶದಲ್ಲಿ 2022ರ ವೇಳೆಗೆ ಶಿಶು ಮರಣ ಪ್ರಮಾಣವನ್ನು 25ರೊಳಗೆ (ಪ್ರತಿ ಸಾವಿರ ಮಗುವಿಗೆ) ಇಳಿಕೆ ಮಾಡುವ ಗುರಿ ಹೊಂದಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ 8ಕ್ಕೆ ಇಳಿಕೆ ಆಗಿದೆ.

ಶೇ.99.9 ಹೆರಿಗೆ ಆಸ್ಪತ್ರೆಯಲ್ಲಿ

ಕಳೆದ ವರ್ಷ ಜಿಲ್ಲೆಯಲ್ಲಿ ಸುಮಾರು 30 ಸಾವಿರ ಹೆರಿಗೆಗಳಾಗಿವೆ. ಈ ಪೈಕಿ ಶೇ.99.9ರಷ್ಟು ಆಸ್ಪತ್ರೆಯಲ್ಲೇ ಆಗಿದೆ. ಹೆಚ್ಚಿನ ಹೆರಿಗೆ ಆಸ್ಪತ್ರೆಯಲ್ಲಿ ನಡೆಯುತ್ತಿರುವುದು ತಾಯಂದಿರ ಮತ್ತು ಮಗುವಿನ ಮರಣ ಪ್ರಮಾಣ ಕ್ಷೀಣಿಸಲು ಪ್ರಮುಖ ಕಾರಣ. ಗರ್ಭಿಣಿಯರಿಗೆ ಮತ್ತು ಮಕ್ಕಳಿಗೆ ಉತ್ತಮ ಆರೈಕೆ ದೊರೆಯುತ್ತಿರುವುದು ಕೂಡ ಮರಣ ಪ್ರಮಾಣ ಇಳಿಕೆಗೆ ನೆರವಾಗಿದೆ. ಸರ್ಕಾರ ವಿವಿಧ ಯೋಜನೆಗಳಡಿ ಗರ್ಭಿಣಿಯರಿಗೆ ನೀಡುತ್ತಿರುವ ಪೌಷ್ಟಿಕ ಆಹಾರ, ಔಷಧ, ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ (ಎನ್‌ಆರ್‌ಎಚ್‌ಎಂ), ಜನನಿ ಶಿಶು ಸುರಕ್ಷಾ ಕಾರ್ಯಕ್ರಮ, ಜನನಿ ಸುರಕ್ಷಾ ಯೋಜನೆ, ನಗು-ಮಗು ಸೇರಿ ಹಲವು ಯೋಜನೆಗಳು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡ ಹಿನ್ನೆಲೆಯಲ್ಲಿ ಹಲವು ಗರ್ಭಿಣಿಯರ ಮತ್ತು ಶಿಶುಗಳ ಜೀವ ಉಳಿದಿದೆ.

ಹೆರಿಗೆಗೆ ಆರ್ಥಿಕ ನೆರವು

ಜಿಲ್ಲೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿರುವ ಅನಕ್ಷರಸ್ಥರು, ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದವರು ಸಾಮಾನ್ಯವಾಗಿ ತಮ್ಮ ಮನೆಗಳಲ್ಲಿಯೇ ಹೆರಿಗೆ ಮಾಡಿಸಿಕೊಳ್ಳುತ್ತಿದ್ದರು. ಆದರೆ, ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಜಾರಿಯಾದ ನಂತರ ಆರೋಗ್ಯದ ಕುರಿತು ಗ್ರಾಮೀಣ ಭಾಗದಲ್ಲಿ ಸಾಕಷ್ಟು ಜಾಗೃತಿ ಮೂಡಿಸುವ ಕಾರ್ಯಗಳು ನಡೆದಿವೆ. ಅಲ್ಲದೆ ಆರ್ಥಿಕವಾಗಿ ಹಿಂದುಳಿದವರು ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡರೆ ಸರ್ಕಾರದಿಂದ ಆರ್ಥಿಕ ನೆರವು ಕೂಡ ದೊರೆಯುತ್ತದೆ. ಸಹಜ ಹೆರಿಗೆಗೆ 2,000 ರೂ., ಶಸ್ತ್ರಚಿಕಿತ್ಸೆ ಹೆರಿಗೆಯಾದರೆ 2,500 ರೂ. ನೀಡಲಾಗುತ್ತಿದೆ. ಬಿಪಿಎಲ್ ಕಾರ್ಡ್‌ದಾರರಿಗೆ ಉಚಿತ ಆರೋಗ್ಯ ಸೇವೆ ದೊರೆಯುತ್ತಿದೆ. ಇದಲ್ಲದೆ, ಸರ್ಕಾರದ ಹಲವು ಯೋಜನೆಗಳು ಗರ್ಭಿಣಿಯರನ್ನು ಆಸ್ಪತ್ರೆಯ ಕಡೆಗೆ ಆಕರ್ಷಿಸುತ್ತಿವೆ.

-----

ಗರ್ಭಿಣಿಯರಿಗೆ ಇಲಾಖೆಯಿಂದ ಅಗತ್ಯ ಔಷಧಗಳನ್ನು ಸಮಯಕ್ಕೆ ಸರಿಯಾಗಿ ನೀಡಲಾಗುತ್ತಿದೆ. ಸರ್ಕಾರ ಜಾರಿಗೆ ತಂದಿರುವ ಹಲವು ಯೋಜನೆಗಳು, ಜನರಲ್ಲಿ ಆರೋಗ್ಯದ ಬಗ್ಗೆ ಮೂಡಿರುವ ಕಾಳಜಿಯಿಂದ ತಾಯಿ, ಶಿಶು ಮರಣ ಪ್ರಮಾಣ ಇಳಿಮುಖವಾಗುತ್ತಿದೆ.

ಡಾ.ಅಮರ್‌ನಾಥ್

ಜಿಲ್ಲಾ ಆರೋಗ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net