ತಾಯಿ-ಮಗಳನ್ನು ಒಂದುಗೂಡಿಸಿದ ಮಕ್ಕಳ ಕಲ್ಯಾಣ ಸಮಿತಿ

ತಾಯಿ-ಮಗಳನ್ನು ಒಂದುಗೂಡಿಸಿದ ಮಕ್ಕಳ ಕಲ್ಯಾಣ ಸಮಿತಿ
Published on

ಹಾಸನ: ತಾಯಿಯಿಂದ ದೂರವಾಗಿದ್ದ ಐದು ವರ್ಷದ ಮಗಳನ್ನು ಪೊಲೀಸರು ಹಾಗೂ ಮಕ್ಕಳ ಕಲ್ಯಾಣ ಸಮಿತಿ ಅಧಿಕಾರಿಗಳು ಒಂದುಗೂಡಿಸಿರುವ ಘಟನೆ ಹಾಸನ ನಗರದ ಪೆನ್‌ಷನ್ ಮೊಹಲ್ಲಾದಲ್ಲಿ ನಡೆದಿದೆ. ಮಗುವಿನ ತಂದೆ ರಿಜ್ವಾನ್ ಅಹಮ್ಮದ್ ತನ್ನ ಮಗಳನ್ನು ತಾಯಿಯಿಂದ ದೂರು ಮಾಡಿದ್ದ.

ಪೆನ್‌ಷನ್‌ಮೊಹಲ್ಲಾ ನಿವಾಸಿ ರಿಜ್ವಾನ್ ಅಹಮದ್ 2016 ರಲ್ಲಿ ನಾಜ್‌ನೀನ್ ಜತೆ ಮದುವೆಯಾಗಿದ್ದ. ಎರಡು ವರ್ಷ ಪತ್ನಿ ಹಾಗೂ ಮಗುನೊಂದಿಗೆ ದುಬೈನಲ್ಲಿದ್ದರು. ನಂತರ ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ದುಬೈನಿಂದ ಕುಟುಂಬ ಸಮೇತರಾಗಿ ರಿಜ್ವಾನ್ ವಾಪಸ್ ಬಂದಿದ್ದ. ಮಾವನ ಮನೆಯಲ್ಲಿ ಪತ್ನಿ ನಾಜ್‌ನೀನ್ ಹಾಗೂ ಐದು ವರ್ಷದ ಪುಟ್ಟ ಮಗಳನ್ನು ಬಿಟ್ಟು ಹೋಗಿದ್ದ. ತದನಂತರ ರಿಜ್ವಾನ್ ಪತ್ನಿಗೂ ತಿಳಿಯದಂತೆ ಮಗುವನ್ನು ಕರೆದುಕೊಂಡು ಹೋಗಿ ತನ್ನ ಪೋಷಕರ ಬಳಿ ಬಿಟ್ಟು, ಕಳೆದ ಐದು ತಿಂಗಳ ಹಿಂದೆ ಪತ್ನಿಗೂ ತಿಳಿಸದೆ ಕೀನ್ಯಾಗೆ ತೆರಳಿದ್ದ. ಮಗು ದಿಢೀರ್ ನಾಪತ್ತೆಯಾಗಿದ್ದರಿಂದ ತಾಯಿ ನಾಜ್‌ನೀನ್ ಪತಿಯೂ ಇಲ್ಲದೆ, ಮಗುವೂ ಇಲ್ಲದೆ ಪರದಾಡಿದ್ದರು.

ಆ ಬಳಿಕ ಮಹಿಳಾ ಪೊಲೀಸ್ ಠಾಣೆಯಲ್ಲಿ ಜೂನ್ 8ರಂದು ತಾಯಿ ಮಗು ನಾಪತ್ತೆ ಸಂಬಂಧ ದೂರು ದಾಖಲಿಸಿದ್ದರು. ಪೊಲೀಸರು ರಿಜ್ವಾನ್ ಮನೆ ಬಳಿ ಹುಡುಕಾಡಿದಾಗಲೂ ಮಗು ಸಿಗಲಿಲ್ಲ. ಈ ವಿಷಯ ಸೋಮವಾರ ಮಕ್ಕಳ ಕಲ್ಯಾಣ ಸಮಿತಿಗೆ ತಿಳಿದಾಗ ಡಿವೈಎಸ್‌ಪಿ ಉದಯ್ ಭಾಸ್ಕರ್ ರಕ್ಷಣೆಯಲ್ಲಿ ಸೋಮವಾರ ರಿಜ್ವಾನ್ ಮನೆ ಬಳಿ ಹೋಗಿ ತನಿಖೆ ನಡೆಸಿದ್ದಾರೆ. ಈ ವೇಳೆ ರಿಜ್ವಾನ್ ತನ್ನ ಮಗಳನ್ನು ಪೋಷಕರ ಮನೆಯಲ್ಲಿಯೇ ಬಚ್ಚಿಟ್ಟಿರುವುದು ತಿಳಿದು ಬಂದಿದೆ.

ಮಗುವನ್ನು ಪೊಲೀಸರು ವಶಕ್ಕೆ ಪಡೆಯುತ್ತಿದ್ದಂತೆ ರಿಜ್ವಾನ್ ಪೋಷಕರ ಮಗುವನ್ನು ನೀಡಲು ವಿರೋಧ ವ್ಯಕ್ತಪಡಿಸಿದ್ದಾರೆ. ಈ ವೇಳೆ ಪೊಲೀಸರು, ಮಕ್ಕಳ ಕಲ್ಯಾಣ ಸಮಿತಿ ಅಧಿಕಾರಿಗಳೊಂದಿಗೆ ರಿಜ್ವಾನ್ ಪೋಷಕರ ನಡುವೆ ವಾಗ್ವಾದ ನಡೆದಿದೆ. ಸದ್ಯ ಮಗು ಬಾಲಮಂದಿರದಲ್ಲಿದ್ದು, ನಾಪತ್ತೆಯಾಗಿದ್ದ ತನ್ನ ಮಗಳನ್ನು ಕಂಡು ತಾಯಿ ನಾಜ್‌ನೀನ್ ಹಾಗೂ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ. ತನಿಖೆ ವೇಳೆ ರಿಜ್ವಾನ್ ಮೊದಲ ಮದುವೆ ವಿಷಯ ಮುಚ್ಚಿಟ್ಟು ನಾಜ್‌ನೀನ್ ಜತೆ ಎರಡನೇ ವಿವಾಹವಾಗಿರುವುದು ತಿಳಿದು ಬಂದಿದೆ. ಇದೀಗ ರಿಜ್ವಾನ್ ಎರಡನೇ ಪತ್ನಿಯನ್ನು ತ್ಯಜಿಸಿ, ಮಗಳನ್ನು ತನ್ನ ಪೋಷಕರ ಬಳಿ ಬಿಟ್ಟು ಕೀನ್ಯಾಗೆ ತೆರಳಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net