ತಾಯಿ ನೆಲದಲ್ಲಿ ಬಡವಾಗುತ್ತಿದೆ ಕನ್ನಡ

3ATHANIGRAMIN1
Published on

ಅಥಣಿ ಗ್ರಾಮೀಣ: ಮಾತೃ ಭಾಷೆಯಲ್ಲಿ ಶಿಕ್ಷಣ ಕೊಡಬೇಕು. ಕನ್ನಡ ಉಳಿಸಿ-ಬೆಳೆಸುವ ಮನೋಭಾವ ಪ್ರತಿಯೊಬ್ಬರಲ್ಲಿ ಬರಬೇಕು ಎಂದು ಹಾರೂಗೇರಿ ಸಾಹಿತಿ ಡಾ.ವಿ.ಎಸ್.ಮಾಳಿ ಹೇಳಿದರು.

ತಾಲೂಕಿನ ಗಡಿಭಾಗದ ಮಹಾರಾಷ್ಟ್ರದ ಜತ್ತ ತಾಲೂಕಿನ ಉಮಾರಾಣಿ ಗ್ರಾಮದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ಮಾತಾಜಿ ಅಕ್ಕಮಹಾದೇವಿ ಜ್ಞಾನ ಯೋಗಾಶ್ರಮದ ಸಂಯುಕ್ತಾಶ್ರಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಂತಾರಾಜ್ಯಮಟ್ಟದ ಕವಿ ಸಮ್ಮೇಳನ ಮತ್ತು ಗಡಿನಾಡು ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದರು. ಎಲ್ಲರೂ ಆಂಗ್ಲ ಭಾಷೆಯ ಬೆನ್ನು ಹತ್ತಿರುವುದು ವಿಷಾದನೀಯ ಸಂಗತಿ. ಕನ್ನಡ ನಾಡಿನಲ್ಲಿ ಕನ್ನಡ ಭಾಷೆ ಬಡವಾಗುತ್ತಿದೆ. ಮಹಾರಾಷ್ಟ್ರದ ಜತ್ತ, ಅಕ್ಕಲಕೋಟ, ಸೊಲ್ಲಾಪುರದಲ್ಲಿ ಕನ್ನಡಿಗರು ಒಂದಾಗಿ ಭಾಷೆ ಉಳಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಉಮರಾಣಿ ಜ್ಞಾನಯೋಗಾಶ್ರಮದ ಅಧ್ಯಕ್ಷೆ ಅಕ್ಕಮಹಾದೇವಿ ಮಾತಾಜಿ ಮಾತನಾಡಿ, ವಚನ ಸಾಹಿತ್ಯ, ಹಂತಿ, ಸೋಬಾನೆಯಂತಹ ಗ್ರಾಮೀಣ

ಸಾಹಿತ್ಯಗಳು ಕನ್ನಡ ಭಾಷೆಯ ಗಟ್ಟಿ ಮಾಧ್ಯಮಗಳಾಗಿವೆ ಎಂದು ತಿಳಿಸಿದರು.

ಜನಮನಗೆದ್ದ ಕವಿತೆಗಳು: ಕವಿಗೋಷ್ಟಿಯಲ್ಲಿ ಕರ್ನಾಟಕ, ಮಹಾರಾಷ್ಟ್ರದ 25ಕ್ಕೂ ಅಧಿಕ ಕವಿಗಳು ಕವನ ವಾಚನ ಮಾಡಿದರು. ವಿಶೇಷವಾಗಿ ರಥಕವಿ ರಾಜಶ್ರೀ ಬಿದರಿ ಅವರ ‘ನಮ್ಮರೈತ’ ಹಾಗೂ ಶಿಕ್ಷಕ ಮಲ್ಲಿಕಾರ್ಜುನ ಗುರವ ಅವರ ‘ಮಹಿಳೆ’ ಕವಿತೆಗಳು ಸಾಹಿತ್ಯಾಸಕ್ತರ ಗಮನ ಸೆಳೆದವು.

ಕರ್ನಾಟಕ ರಕ್ಷಣಾ ವೇದಿಕೆ ಗೌರವಾಧ್ಯಕ್ಷ ವಿಜಯಕುಮಾರ, ಬಸವರಾಜ ಪಾಟೀಲ, ರಾಜೇಂದ್ರ ಬಿರಾದಾರ, ಅಮಗೊಂಡ ಪಾಂಡರೆ, ವಿಜಯಕುಮಾರ ನಾಯಕ, ಬಾಬುರಾವ ದೇವನಾಯಕ, ಮಲ್ಲಿಕಾರ್ಜುನ ಬಿಳ್ಳೂರ, ಮಲ್ಲಿಕಾರ್ಜುನ ಕೊಟ್ಟಲಗಿ, ಅಶೋಕ ವಾಣಿ, ಬಸವರಾಜ ಹಿರೇಮಠ, ಶ್ರೀಶೈಲ ಅವಟಿ ಇತರರು ಇದ್ದರು. ಜಯಾನಂದ ತುಂಗಳ ಸ್ವಾಗತಿಸಿದರು. ಮೀನಾಕ್ಷಿ ಹತ್ತಿ ವಂದಿಸಿದರು. ಶರಣು ಜಾವೇದ ನಿರೂಪಿಸಿದರು.

-------------------

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net