ತಾಯಿ ಓದಿದ ಹಳ್ಳಿಗೆ ಶಾಲೆ ನಿರ್ಮಿಸಿಕೊಟ್ಟ ಮಗ : ಕೋರಾದಲ್ಲಿ ಸರ್ಕಾರಿ ಹೈಟೆಕ್​ ಶಾಲೆ

02
Published on

ಸೋರಲಮಾವು ಶ್ರೀಹರ್ಷ ತುಮಕೂರು

ತಾಯಿ ಒಂದೆರಡು ವರ್ಷ ಓದಿದ ಶಾಲೆ ಎಂಬ ಕಾರಣಕ್ಕೆ ಬಹುವರ್ಷದ ನಂತರ ಅವರ ಮಗ ಸರ್ಕಾರಿ ಶಾಲೆಗೆ 2 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಿಕೊಟ್ಟಿರುವ ಸಾರ್ಥಕ ಕೆಲಸ ತಾಲೂಕಿನ ಕೋರಾದಲ್ಲಿ ನಡೆದಿದೆ.

ಬೆಂಗಳೂರಿನಲ್ಲಿ ಖಾಸಗಿ ಉದ್ಯಮ ನಡೆಸುತ್ತಿರುವ ಹರ್ಷ ಎಚ್​.ಮಠ್​ ಅವರ ತಾಯಿ ಸರ್ವಮಂಗಳಾ ನಾಗಯ್ಯ ಅವರ ನೆನಪಿಗೆ ಕೋರಾ ಸರ್ಕಾರಿ ಶಾಲೆಯನ್ನು ನಿರ್ಮಿಸಿಕೊಟ್ಟಿದ್ದು ಗ್ರಾಮೀಣ ಮಕ್ಕಳಿಗೆ ಅನುಕೂಲವಾಗಲಿದೆ.

ಶಿರಾಗೆ ತೆರಳುವ ಮಾರ್ಗದಲ್ಲಿ ತುಮಕೂರು ಹೊರವಲಯದಲ್ಲಿರುವ ಕೋರಾ ಹೋಬಳಿ ಕೇಂದ್ರವಾಗಿದ್ದು, ರಾಷ್ಟ್ರೀಯ ಹೆದ್ದಾರಿ 48ರ ವಿಸ್ತರಣೆ ಕಾರಣಕ್ಕೆ ಗ್ರಾಮದ ಶಾಲೆ ಕಟ್ಟಡ ಕೆಡವಲಾಗಿತ್ತು.

2 ವರ್ಷದ ಹಿಂದೆ ಕಾರ್ಯನಿಮಿತ್ತ ರಾಷ್ಟ್ರೀಯ ಹೆದ್ದಾರಿಯಲ್ಲಿ ತೆರಳುವ ಮಾರ್ಗದಲ್ಲಿ "ಕೋರಾ' ಎಂಬ ಹೆಸರು ಕಂಡು ತಾಯಿಯ ಊರು ಎಂಬ ಅಭಿಮಾನದಿಂದ ಕಾರು ನಿಲ್ಲಿಸಿ ಇಳಿದಿದ್ದು, ಈ ಸತ್ಕಾರ್ಯಕ್ಕೆ ಕಾರಣವಾಗಿದೆ. ಊರಿನ ಮೊಮ್ಮಗ, ದಾನಿ ಹರ್ಷ ಎಚ್​.ಮಠ್​ ಅವರ ಬಗ್ಗೆ ಇಲ್ಲಿನ ಜನರಲ್ಲಿ ಅಭಿಮಾನವೇ ಮೂಡಿದೆ.

ಗ್ರಾಮಸ್ಥರ ಬಹುದಿನದ ಕನಸು: ರಾಷ್ಟ್ರೀಯ ಹೆದ್ದಾರಿ 48ರ ಪಕ್ಕದಲ್ಲಿಯೇ ಇರುವ ಕೋರಾ ಸರ್ಕಾರಿ ಶಾಲೆಯ ವಾತಾವರಣ ಕಲಿಕೆಗೆ ಪೂರಕವಾಗಿರಲಿಲ್ಲ, ಸದಾ ವಾಹನಗಳ ಶಬ್ಧ ಹಾಗೂ ಮಕ್ಕಳು ರಸ್ತೆ ದಾಟುವಾಗ ಅಪಘಾತ ಕೂಡ ಸಂಭವಿಸಿದ್ದೂ ಸಾಕಷ್ಟಿದೆ. ಇದೆಲ್ಲಾ ಆತಂಕದ ನಡುವೆ ಹೊಸ ಕಟ್ಟಡ ನಿರ್ಮಿಸಬೇಕು ಎಂಬ ಬೇಡಿಕೆ ಈ ಗ್ರಾಮದ ಬಹುದಿನ ಬೇಡಿಕೆಯಾಗಿತ್ತು.

ನಾಳೆ ಶಾಲಾ ಕಟ್ಟಡ ಉದ್ಘಾಟನೆ: ಹರ್ಷ ಎಚ್​.ಮಠ್​ ಅವರ ನೆರವಿನಿಂದ ಕೋರಾ ಗ್ರಾಮದಲ್ಲಿ 2ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ 14 ಕೊಠಡಿಗಳಿರುವ ಸುಸಜ್ಜಿತ ಹೈಟೆಕ್​ ಶಾಲೆ ಉದ್ಘಾಟನಾ ಸಮಾರಂಭ ಏ.20ರಂದು ಬೆಳಗ್ಗೆ 11ಕ್ಕೆ ನಡೆಯಲಿದೆ.

ತಾಯಿಯ ಊರಿನೊಂದಿಗೆ ಸಂಪರ್ಕದಲ್ಲಿರುವ ತುಡಿತದಿಂದ, ಆಕೆಯ ನೆನಪಿಗಾಗಿ ಬಡ ಮಕ್ಕಳಿಗೆ ಅನುಕೂಲವಾಗುವಂತೆ ಸಾರ್ಥಕ ಕೆಲಸ ಮಾಡಿರುವ ಶ್ರೀಮಮತಾ ಮತ್ತು ಹರ್ಷ ಎಚ್​.ಮಠ್​ ದಂಪತಿಗೆ ಗ್ರಾಮಸ್ಥರೇ ಸನ್ಮಾನ ಏರ್ಪಡಿಸಿದ್ದು, ಗ್ರಾಮದಲ್ಲಿ ಹಬ್ಬದ ಕಳೆ ಮೂಡಿದೆ. ಶಾಲೆಯ ಹಿರಿಯ, ಕಿರಿಯ ವಿದ್ಯಾರ್ಥಿಗಳು, ಗ್ರಾಮಸ್ಥರು, ಜನಪ್ರತಿನಿಧಿಗಳು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಈ ಸಂಭ್ರಮದಲ್ಲಿ ಭಾಗಿಯಾಗಲಿದ್ದಾರೆ.

ನನ್ನ ಬಾಲ್ಯದಲ್ಲಿ ಅಮ್ಮನ ಜತೆ ಕೋರಾಗೆ ಭೇಟಿ ನೀಡಿದ್ದ ನೆನಪು, ಎರಡು ವರ್ಷದ ಹಿಂದೆ ಈ ಮಾರ್ಗದಲ್ಲಿ ಹೋಗುವಾಗ ತಾಯಿ ನೆನಪಿನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಏನಾದರೂ ಮಾಡಬೇಕು ಎಂದು ಸ್ಥಳಿಯರಲ್ಲಿ ಹೇಳಿದಾಗ, ಶಾಲೆ ಕಟ್ಟಡದ ಅಗತ್ಯದ ಬಗ್ಗೆ ತಿಳಿಸಿದರು. ಕೂಡಲೇ ಒಪ್ಪಿಗೆ ನೀಡಿ ಕಟ್ಟಡ ನಿರ್ಮಾಣ ಆರಂಭಿಸಿದ್ದೆವು, ಈಗ ಸುಸಜ್ಜಿತ ಶಾಲೆ ನಿರ್ಮಾಣವಾಗಿದ್ದು ಮಕ್ಕಳಿಗೆ ಅನುಕೂಲವಾದರೆ ನಮ್ಮ ಕೆಲಸ ಸಾರ್ಥಕ ಎನಿಸಲಿದೆ. > ಹರ್ಷ ಎಚ್​.ಮಠ್​ ದಾನಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net