ತಾಮ್ರಕ್ಕಾಗಿ ಕೊಳವೆಬಾವಿ ಕೇಬಲ್ ಕಳವು : ಪೊಲೀಸರ ಗಸ್ತು ಹೆಚ್ಚಿಸಲು ರೈತರ ಮನವಿ

2
Published on

ರಾಮನಗರ: ರೈತರಿಗೆ ಒಂದಿಲ್ಲೊಂದು ಸಮಸ್ಯೆ ಕಾಡುತ್ತಲೇ ಇದ್ದು, ಇದೀಗ ಜಿಲ್ಲೆಯಲ್ಲಿ ಕೇಬಲ್ ಕಳ್ಳರ ಹಾವಳಿ ಹೆಚ್ಚಿದೆ.

ಜಮೀನುಗಳಲ್ಲಿ ಕೊಳವೆಬಾವಿಗಳಿಗೆ ಅಳವಡಿಸಿರುವ ವಿದ್ಯುತ್ ಕೇಬಲ್‌ಗಳನ್ನು ಕಳವು ಮಾಡುವ ಜಾಲ ಸಕ್ರಿಯವಾಗಿದ್ದು, ರೈತರನ್ನು ಕಂಗಾಲಾಗಿಸಿದೆ.

ಪದೇಪದೆ ಕಳವು: ಜಿಲ್ಲೆಯ ಬಹುತೇಕ ಎಲ್ಲ ಠಾಣೆಗಳ ವ್ಯಾಪ್ತಿಯಲ್ಲಿಯೂ ಕೇಬಲ್ ಕಳವು ಆರಂಭಗೊಂಡಿದೆ. ಆಳದ ಬೋರ್‌ವೆಲ್‌ಗಳಿಂದ ನೀರೆತ್ತಲು ನೂರಾರು ಅಡಿಗಳ ಆಳದಲ್ಲಿ ಪಂಪ್‌ಸೆಟ್ ಅಳವಡಿಸಲಾಗಿರುತ್ತದೆ. ಇದಕ್ಕೆ ವಿದ್ಯುತ್ ಪೂರೈಕೆ ಮಾಡಲು ಅಷ್ಟೇ ಉದ್ದದ ಕೇಬಲ್‌ಗಳನ್ನು ಪಂಪ್‌ಸೆಟ್ ಜತೆಗೆ ಬಿಡಲಾಗಿರುತ್ತದೆ. ಬೆಳಗಿನ ವೇಳೆಯಲ್ಲಿ ಯಾವುದಾದರೂ ನೆಪ ಮಾಡಿಕೊಂಡು ಜಮೀನುಗಳ ಬಳಿ ಸುಳಿಯುವ ಕಳ್ಳರು ರಾತ್ರಿ ವೇಳೆಯಲ್ಲಿ ಜಮೀನಿನಲ್ಲಿ ಕೈಚಳಕ ತೋರಿಸಿ ಕೇಬಲ್‌ಗಳನ್ನು ಕದ್ದು ಪರಾರಿ ಆಗುತ್ತಾರೆ. ಬಿಡದಿ ಅರಳಾಳುಸಂದ್ರ ಸುತ್ತಮುತ್ತಲ ಗ್ರಾಮಗಳಲ್ಲಿ ಪದೇಪದೆ ಕೇಬಲ್‌ಗಳ ಕಳವು ಪ್ರಕರಣಗಳು ನಡೆಯುತ್ತಲೇ ಇದೆ. ಇತ್ತೀಚೆಗೆ ಚನ್ನಪಟ್ಟಣ ವ್ಯಾಪ್ತಿಯಲ್ಲಿಯೂ ಇಂತಹ ಪ್ರಕರಣಗಳು ಹೆಚ್ಚಾಗಿವೆ. ಒಮ್ಮೆ ಮೀಟರ್‌ಗಟ್ಟಲೆ ಕೇಬಲ್ ಕಳವಾದರೆ ರೈತರಿಗೆ ಸಾವಿರಾರು ರೂ. ನಷ್ಟ ಉಂಟಾಗುತ್ತದೆ.

ತಾಮ್ರಕ್ಕೆ ಭಾರೀ ಬೆಲೆ: ಸುಲಭವಾಗಿ ಹಣ ಸಂಪಾದನೆ ಮಾಡುವ ಮಾರ್ಗದಲ್ಲಿ ಕೇಬಲ್ ಕಳವು ಸಹ ಒಂದಾಗಿದೆ. ಸಾಮಾನ್ಯವಾಗಿ ಕೊಳವೆಬಾವಿಗಳಿಗೆ ಅಳವಡಿಸುವ ಕೇಬಲ್ ತಯಾರಿಕೆಗೆ ಗುಣಮಟ್ಟದ ತಾಮ್ರವನ್ನು ಬಳಕೆ ಮಾಡುವುದರಿಂದ ಹಾಗೂ ಮಾರುಕಟ್ಟೆಯಲ್ಲಿ ತಾಮ್ರಕ್ಕೆ ಭಾರೀ ಬೆಲೆ ಇರುವ ಕಾರಣ ಕಳ್ಳರು ಹಣ ಸಂಪಾದನೆಯ ಸುಲಭ ಮಾರ್ಗವಾಗಿ ಕೇಬಲ್‌ಗಳ ಕಳವಿಗೆ ಇಳಿದಿದ್ದಾರೆ. ಕೇಬಲ್ ಕಳವು ಮಾಡುವ ಕಳ್ಳರು ಆ ಜಮೀನಿನಲ್ಲಿಯೇ ಅವುಗಳನ್ನು ಸುಟ್ಟು ತಾಮ್ರವನ್ನು ತೆಗೆದುಕೊಂಡು ಹೋಗುತ್ತಾರೆ.

ರಾತ್ರಿ ಗಸ್ತು ಹೆಚ್ಚಿಸಬೇಕು: ಜಿಲ್ಲೆಯಲ್ಲಿ ಪಂಪ್‌ಸೆಟ್‌ಗಳ ಕೇಬಲ್ ಕಳವು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾತ್ರಿ ವೇಳೆಯಲ್ಲಿ ಗ್ರಾಮೀಣ ಭಾಗದಲ್ಲಿ ಪೊಲೀಸ್ ಗಸ್ತು ವ್ಯವಸ್ಥೆಯನ್ನು ಹೆಚ್ಚಿಸಬೇಕಿದೆ. ರಾತ್ರಿ ಹೊತ್ತಿನಲ್ಲಿಯೇ ಕೇಬಲ್ ಕಳವು ಪ್ರಕರಣಗಳು ನಡೆಯುವುದರಿಂದ ಅನುಮಾನಾಸ್ಪದ ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸಿದರೆ ಹಾಗೂ ರಾತ್ರಿ ವೇಳೆಯಲ್ಲಿ ಪೊಲೀಸರ ಓಡಾಟ ಹೆಚ್ಚಾದರೆ ಕಳ್ಳರ ಉಪಟಳವೂ ಕಡಿಮೆ ಆಗಲಿದೆ.

ರೈತರು ಎಚ್ಚೆತ್ತುಕೊಳ್ಳಬೇಕಿದೆ: ಕೇಬಲ್ ಕಳವು ಪ್ರಕರಣ ದಿನೇದಿನೆ ಹೆಚ್ಚುತ್ತಿರುವ ಸಂದರ್ಭದಲ್ಲಿ ರೈತರು ಸಹ ತಮ್ಮ ಪಂಪ್‌ಸೆಟ್‌ಗಳಿಗೆ ಹಾಕುವ ಕೇಬಲ್‌ಗಳ ರಕ್ಷಣೆಗೆ ಕ್ರಮ ಕೈಗೊಳ್ಳಬೇಕಿದೆ. ಕೇಬಲ್‌ಗಳನ್ನು ಪಂಪ್‌ಹೌಸ್‌ನಿಂದ ಬೋರ್‌ವೆಲ್‌ಗೆ ಸಂಪರ್ಕ ಕಲ್ಪಿಸುವವರೆಗೂ ಆಳದಲ್ಲಿ ಹೂಳುವ ಹಾಗೂ ಬಾವಿಯಿಂದ ಕೇಬಲ್ ಹೊರಗೆ ಎಳೆಯಲು ಸಾಧ್ಯವಾಗದಂತೆ ಮುಚ್ಚಲು ಕ್ರಮ ಕೈಗೊಳ್ಳಬೇಕಿದೆ. ಜತೆಗೆ ಬೆಳಗಿನ ವೇಳೆಯಲ್ಲಿ ಜಮೀನುಗಳ ಬಳಿ ಸುಳಿಯುವ ಅಪರಿಚಿತರ ಬಗ್ಗೆ ನಿಗಾವಹಿಸುವ ಕೆಲಸ ಮಾಡಬೇಕಿದೆ.

ಬಿಡದಿ ಅರಳಾಳುಸಂದ್ರ ಸುತ್ತಮುತ್ತ ಹಲವಾರು ಬಾರಿ ಪಂಪ್‌ಸೆಟ್‌ಗಳ ಕೇಬಲ್ ಕಳವಾಗಿದೆ. ಈ ಬಗ್ಗೆ ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರೂ ಇದುವರೆಗೂ ಕಳ್ಳರ ಪತ್ತೆ ಆಗಿಲ್ಲ. ಪೊಲೀಸರು ಕೇಬಲ್ ಕಳ್ಳರ ಪತ್ತೆಗೆ ಕ್ರಮ ವಹಿಸಬೇಕು. ಶ್ರೀನಿವಾಸ್, ಅರಳಾಳು ಸಂದ್ರ ಸಿ. ಪುಟ್ಟಸ್ವಾಮಿ, ರೈತ ಮುಖಂಡರೈತರು ಈಗಾಗಲೇ ಹಲವಾರು ಕಾರಣಗಳಿಂದ ನಷ್ಟದಲ್ಲಿ ಇದ್ದಾರೆ. ಇಂತಹ ಸನ್ನಿವೇಶದಲ್ಲಿ ಕೇಬಲ್ ಕಳವು ಅವರಿಗೆ ಮತ್ತಷ್ಟು ನಷ್ಟವನ್ನು ಉಂಟು ಮಾಡುತ್ತದೆ. ಪೊಲೀಸರು ರಾತ್ರಿ ವೇಳೆಯಲ್ಲಿ ಗಸ್ತು ಹೆಚ್ಚಳ ಮಾಡಬೇಕು. ಅನುಮಾನಾಸ್ಪದ ವ್ಯಕ್ತಿಗಳನ್ನು ಹಿಡಿದು ವಿಚಾರಣೆಗೆ ಒಳಪಡಿಸಬೇಕು.*** *** ಕೊಳವೆ ಬಾವಿಗಳ ಕೇಬಲ್‌ಗಳ ಕಳವು ಸ್ಥಳೀಯರೇ ಮಾಡುತ್ತಾರೆ. ಇವರನ್ನು ಪತ್ತೆ ಹಚ್ಚುವ ಕೆಲಸ ಪ್ರಗತಿಯಲ್ಲಿದ್ದು, ಶೀಘ್ರವೇ ಇದಕ್ಕೆ ಕಡಿವಾಣ ಹಾಕಲಾಗುವುದು. ಕೆ.ಸಂತೋಷ್ ಬಾಬು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net