ತಾಪಮಾನ ಹೆಚ್ಚಳ ಮುಂದುವರೆದರೆ ಜೀವಸಂಕುಲ ವಿನಾಶ

11-MAR-GPT-2
Published on

ಗುಂಡ್ಲುಪೇಟೆ: ಪ್ರತಿ ವರ್ಷ ಜಾಗತಿಕ ತಾಪಮಾನ ಹೆಚ್ಚಾಗುತ್ತಿದ್ದರೂ ಇದರ ನಿಯಂತ್ರಣಕ್ಕೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ವನ್ಯಜೀವಿ ಛಾಯಾಗ್ರಾಹಕ ಆರ್.ಕೆ.ಮಧು ಹೇಳಿದರು.

ತಾಲೂಕಿನ ದೊಡ್ಡತುಪ್ಪೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಂಜನಾದ್ರಿ ಇಕೋ ಕ್ಲಬ್ ವತಿಯಿಂದ ಆಯೋಜಿಸಿದ್ದ ಪರಿಸರ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪರಿಸರ ನಾಶ, ಅರಣ್ಯ ನಾಶ, ಬೃಹತ್ ಯೋಜನೆಗಳಿಂದಾಗಿ ಪ್ರತಿ ವರ್ಷವೂ ಜಾಗತಿಕ ತಾಪಮಾನ ಏರಿಕೆಯಾಗುತ್ತಿದೆ. ಬೇಸಿಗೆಗೂ ಮೊದಲೇ ಬಿಸಿಲಿನ ತೀವ್ರತೆ ಹೆಚ್ಚಾಗುತ್ತಿದ್ದು, ಪರಿಸರದ ಮೇಲೆ ತುಂಬಾ ಗಂಭೀರ ಪರಿಣಾಮ ಬೀರುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಜೀವಸಂಕುಲ ವಿನಾಶಕ್ಕೆ ಸಿಲುಕುವ ಅಪಾಯವಿದೆ. ಆದ್ದರಿಂದ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು ಅದರೊಂದಿಗೆ ಹೊಂದಿಕೊಂಡು ನಮ್ಮ ಜೀವನಶೈಲಿಯನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು.

ಅರಣ್ಯದ ನದಿಗಳ ಜೋಡಣೆ, ಬೃಹತ್ ಡ್ಯಾಂಗಳ ನಿರ್ಮಾಣ, ನೀರಿನ ಅರ್ಥಹೀನ ನಿರ್ವಹಣೆಯಿಂದ ಪರಿಸರ ಏರುಪೇರಾಗಿದೆ. ಮಾನವ-ಪ್ರಾಣಿ ಸಂಘರ್ಷ ಬೇಸಿಗೆಯಲ್ಲಿ ಕಾಳ್ಗಿಚ್ಚುಗಳು ಹೆಚ್ಚಾಗುತ್ತಿದೆ. ಪ್ರತಿ ವರ್ಷವೂ ನಾನಾ ಕಾರಣಗಳಿಗಾಗಿ ಲಕ್ಷಾಂತರ ಮರಗಳನ್ನು ಕಡಿಯಲಾಗುತ್ತಿದೆ. ಆದ್ದರಿಂದ ಈಗಿನಿಂದಲೇ ಮಕ್ಕಳು ಜಾಗೃತರಾಗಿ ಪರಿಸರ ಪ್ರೇಮ ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬರೂ ಪ್ಲಾಸ್ಟಿಕ್ ಬಳಕೆ ಕಡಿಮೆಮಾಡಿ ಒಂದು ಸಸಿ ನೆಟ್ಟು ಪೋಷಿಸುವ ಮೂಲಕ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕ ಗಣೇಶ್, ಸಹಶಿಕ್ಷಕರಾದ ಪ್ರದೀಪ್ ಕುಮಾರ್, ಮಹಾದೇವಿ, ಸ್ನೇಹಾ ಹಾಗೂ ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net