

ಧಾರವಾಡ: ಇಲ್ಲಿಯ ತಾಲೂಕು ಪಂಚಾಯಿತಿಯ ಕೊನೇ ಅವಧಿಯ ಅಧ್ಯಕ್ಷರಾಗಿ ಮಾದನಬಾವಿ ಕ್ಷೇತ್ರದ ಕಾಂಗ್ರೆಸ್ ಸದಸ್ಯ ರವಿವರ್ಮ ಪಾಟೀಲ ಆಯ್ಕೆಯಾಗಿದ್ದಾರೆ.
ತಾಪಂ ಕಚೇರಿಯಲ್ಲಿ ಉಪವಿಭಾಗಾಧಿಕಾರಿ ಮಹ್ಮದ್ ಜುಬೇರ್ ನೇತೃತ್ವದಲ್ಲಿ ಮಂಗಳವಾರ ಏರ್ಪಾಟಾಗಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ನ ರವಿವರ್ಮ ಪಾಟೀಲ ಹಾಗೂ ಅಮ್ಮಿನಭಾವಿ ಕ್ಷೇತ್ರದ ಸುರೇಂದ್ರ ದೇಸಾಯಿ ಸ್ಪರ್ಧಿಸಿದ್ದರು. ಬೆಳಗ್ಗೆ 11 ಗಂಟೆಗೆ ಪ್ರಾರಂಭವಾದ ಚುನಾವಣೆ ಪ್ರಕ್ರಿಯೆಯಲ್ಲಿ ಸದಸ್ಯರು ಕೈ ಎತ್ತುವ ಮೂಲಕ ಮತ ಚಲಾಯಿಸಿದರು. 24 ಸಂಖ್ಯಾಬಲ ಹೊಂದಿರುವ ತಾಪಂಗೆ ಅಧ್ಯಕ್ಷರ ಆಯ್ಕೆಗೆ 13 ಜನರ ಬೆಂಬಲ ಬೇಕಿತ್ತು. ಆದರೆ ಅಭ್ಯರ್ಥಿಗಳು ತಲಾ 12 ಮತಗಳನ್ನು ಪಡೆದಿದ್ದರು. ಇಬ್ಬರೂ ಸಮಬಲ ಸಾಧಿಸಿದ ಹಿನ್ನೆಲೆಯಲ್ಲಿ ಚೀಟಿ ಎತ್ತುವ ಮೂಲಕ ಅಧ್ಯಕ್ಷರ ಆಯ್ಕೆಯನ್ನು ಅಂತಿಮಗೊಳಿಸಲಾಯಿತು.
ಸ್ಪರ್ಧೆಯಲ್ಲಿ ರವಿವರ್ಮ ಪಾಟೀಲ ಅವರಿಗೆ ಕಾಂಗ್ರೆಸ್ನ 11 ಜನ ಹಾಗೂ ಪಕ್ಷೇತರ ಅಭ್ಯರ್ಥಿ ಬೆಂಬಲ ನೀಡಿದ್ದರೆ, ಸುರೇಂದ್ರ ದೇಸಾಯಿ ಅವರಿಗೆ ಬಿಜೆಪಿಯ 8, ಜೆಡಿಎಸ್ನ 1, ಪಕ್ಷೇತರ 2 ಹಾಗೂ ಕಾಂಗ್ರೆಸ್ನ ಒಬ್ಬ ಸದಸ್ಯರು ಬೆಂಬಲ ಸೂಚಿಸಿದ್ದರು.
ಹಿಂದಿನ ಅವಧಿಯ ಅಧ್ಯಕ್ಷ ಈರಪ್ಪ ಏಣಗಿ ಮಾ. 18ರಂದು ರಾಜೀನಾಮೆ ನೀಡಿದ ಬಳಿಕ 15 ದಿನಗಳಲ್ಲೇ ಚುನಾವಣೆ ನಡೆಸಿ ಅಧ್ಯಕ್ಷರನ್ನು ಆಯ್ಕೆ ಮಾಡಬೇಕಿತ್ತು. ಆದರೆ, ಕರೊನಾ ಹಾವಳಿಯಿಂದ ಆಯ್ಕೆ ಪ್ರಕ್ರಿಯೆ ರದ್ದು ಮಾಡಲಾಗಿತ್ತು.
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ 11, ಬಿಜೆಪಿ 8, ಜೆಡಿಎಸ್ 1 ಹಾಗೂ ನಾಲ್ವರು ಪಕ್ಷೇತರರು ಆಯ್ಕೆಯಾಗಿದ್ದರು. ನಂತರ ಜೆಡಿಎಸ್ ಹಾಗೂ ಪಕ್ಷೇತರರ ಬೆಂಬಲದಿಂದ ಅಧಿಕಾರದ ಚುಕ್ಕಾಣಿ ಹಿಡಿದ ಕಾಂಗ್ರೆಸ್, ಮೊದಲ ಅವಧಿಗೆ (30 ತಿಂಗಳು) ಮಲ್ಲಪ್ಪ ಭಾವಿಕಟ್ಟಿ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿತ್ತು. ನಂತರ 2ನೇ ಅವಧಿಗೆ (16 ತಿಂಗಳು) ಈರಪ್ಪ ಏಣಗಿ ಅಧ್ಯಕ್ಷರಾಗಿದ್ದರು.
ದೇಸಾಯಿಗೆ ಒಲಿಯದ ಅದೃಷ್ಟ ತಾಪಂ ಅಧ್ಯಕ್ಷರ ಆಯ್ಕೆಗೆ ದಿನಾಂಕ ನಿಗದಿಪಡಿಸಿದ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ರವಿವರ್ಮ ಪಾಟೀಲರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಬಹುತೇಕ ನಿರ್ಣಯಿಸಿದ್ದರು. ಆದರೆ ಅಮ್ಮಿನಭಾವಿ ಕ್ಷೇತ್ರದ ಸುರೇಂದ್ರ ದೇಸಾಯಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದರಿಂದ ಗೊಂದಲ ಉಂಟಾಗಿತ್ತು. ಅವರ ಮನವೊಲಿಸುವ ಪ್ರಯತ್ನ ಸಹ ನಡೆದಿತ್ತು. ಸುರೇಂದ್ರ ದೇಸಾಯಿ ಬಿಜೆಪಿ, ಜೆಡಿಎಸ್ ಹಾಗೂ ಪಕ್ಷೇತರರೊಂದಿಗೆ ಮಾತುಕತೆ ನಡೆಸಿ ಬೆಂಬಲ ಕೋರಿದ್ದರು. ಅವರೆಲ್ಲರೂ ಒಪ್ಪಿಗೆ ನೀಡಿದ್ದರಿಂದ ತಮ್ಮ ಆಯ್ಕೆ ಸರಳವಾಗಬಹುದು ಎಂಬ ಭರವಸೆಯಲ್ಲೇ ನಾಮಪತ್ರ ಸಲ್ಲಿಸಿದ್ದರು. ಆದರೆ ಒಬ್ಬ ಪಕ್ಷೇತರ ಮಾತ್ರ ಪಾಟೀಲ ಅವರಿಗೆ ಬೆಂಬಲಿಸಿದ್ದರಿಂದ ದೇಸಾಯಿ ಅವರಿಗೆ ಕೊಂಚ ಹಿನ್ನಡೆಯಾಯಿತು. ಮತದಾನದಲ್ಲಿ ಸಮಬಲ ಸಾಧಿಸಿದ ಬಳಿಕ ಚೀಟಿ ಎತ್ತುವ ಮೂಲಕ ಆಯ್ಕೆ ಪ್ರಕ್ರಿಯೆಯಲ್ಲೂ ಅದೃಷ್ಟ ಕೈ ಹಿಡಿಯದೇ ಇದ್ದಾಗ ಸಭಾಂಗಣದಿಂದ ಹೊರ ನಡೆದರು. ತಾಪಂ ಇಒ ಎಸ್.ಎಸ್. ಖಾದ್ರೊಳ್ಳಿ, ಇತರರು ಭಾಗವಹಿಸಿದ್ದರು.