

ಹೊಸಪೇಟೆ: ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಮುಗಿಸುವುದಾಗಿ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ಹೇಳಿಕೆ ನೀಡಿದ್ದು, ಅವರಿದ್ದ ಜಾಗಕ್ಕೆ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರರನ್ನು ಕರೆತರುತ್ತೇನೆ. ತಾಕತ್ತಿದ್ದರೆ ಮುಗಿಸಲಿ ನೋಡೋಣ ಎಂದು ಕೆಪಿಸಿಸಿ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೆವಾಲಾ ಸವಾಲು ಹಾಕಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ನಗರದಲ್ಲಿ ಶನಿವಾರ ಆಯೋಜಿಸಿದ್ದ ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ರಾಜ್ಯದಲ್ಲಿ ಅಭಿವೃದ್ಧಿ ಪಾತಾಳಕ್ಕಿಳಿದಿದೆ. ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಇದರಿಂದ ನೊಂದು, ಬೆಂದಿರುವ ಜನಸಾಮಾನ್ಯರು ಕಾಂಗ್ರೆಸ್ ಪಕ್ಷದತ್ತ ಮುಖ ಮಾಡಿದ್ದಾರೆ. ಕಾಂಗ್ರೆಸ್ ನಾಯಕರ ಜನಪ್ರಿಯತೆ ಹೆಚ್ಚುತ್ತಿದೆ. ಅದನ್ನು ಬಿಜೆಪಿಯವರಿಗೆ ಸಹಿಸಲು ಆಗುತ್ತಿಲ್ಲ. ಹೀಗಾಗಿ ಕಾಂಗ್ರೆಸ್ ನಾಯಕರನ್ನು ಮುಗಿಸುವ ಮಾತನಾಡುತ್ತಿದ್ದಾರೆ. ಇದು ಬಿಜೆಪಿ ಅವರ ಗೂಂಡಾ ಪ್ರವೃತ್ತಿಗೆ ಹಿಡಿದ ಕನ್ನಡಿಯಾಗಿದೆ ಎಂದರು.
ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡ್ ಭರವಸೆಯಿಂದ ಬಿಜೆಪಿ ನಾಯಕರು ಬೆವರುತ್ತಿದ್ದಾರೆ. ಕೆಲವರು ನಡುಗುತ್ತಿದ್ದಾರೆ. ಆದರೆ, ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡ್ ರಾಜ್ಯ ರಾಜಕೀಯದಲ್ಲಿ ಇತಿಹಾಸ ಸೃಷ್ಟಿಸಲಿದೆ. ಇದು ಕರ್ನಾಟಕಕ್ಕೆ ಸೀಮತವಾಗದು. ಬದಲಿಗೆಇ ದೇಶಾದ್ಯಂತ ವಿಸ್ತರಣೆಯಾಗಲಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಗೆಲುವಿಗೆ ಮುನ್ನುಡಿಯಾಗಲಿದೆ ಎಂದರು.
ರಾಜ್ಯ ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಯಾವುದೇ ಭಾಗಕ್ಕೆ ಬೊಮ್ಮಾಯಿ ಭೇಟಿ ನೀಡಿದರೂ, ಪೇಸಿಎಂ ಎಂದು ಗುರುತಿಸುವಂತಾಗಿದೆ. ಇದು ಕರ್ನಾಟಕಕ್ಕೆ ಅಂಟಿದ ಕಳಂಕ. ಗುತ್ತಿಗೆದಾರರಿಂದ ಆರಂಭಗೊಂಡ ಶೇ.40 ಕಮಿಷನ್ ಆರೋಪ ಕರ್ನಾಟಕ ಖಾಸಗಿ ಶಾಲೆಗಳ ಸಂಘ(ರೂಪ್ಸಾ) ಕೂಡ ಮಾತನಾಡಿದೆ. ಇದೀಗ ಮಠ ಮಾನ್ಯಗಳಿಗೆ ಸರ್ಕಾರ ನೀಡುವ ಅನುದಾನದಲ್ಲಿ ಕಮಿಷನ್ ಕೇಳುತ್ತಿರುವ ಆರೋಪವಿದೆ ಎಂದರು.
ಬೆಳಗಾವಿಯ ಸಂತೋಷ ಪಾಟೀಲ ಸರ್ಕಾರದ ಕಮಿಷನ್ ದುರಾಸೆಗೆ ಬಲಿಯಾದರು. ಆದರೆ, ಕಟ್ಟುನಿಟ್ಟಿನ ತನಿಖೆಯಾಗಲಿಲ್ಲ ಸಿಎಂ,್ ಬಿಜೆಪಿ ನಾಯಕರಿಗೆ ಹಷ ಎಷ್ಟು ಬೇಕಾದರೂ ನಾವ್ು ಕೊಡುತ್ತೇನೆ. ಸಂತೋಷ್ ಪಾಟೀಲರನ್ನು ಬದುಕಿಸಿಕೊಡಲಿ ಎಂದು ಹೆತ್ತವರು ಸಂಕಟಪಡುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಬಳ್ಳಾರಿ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶಿವಯೋಗಿ, ಮಾಜಿ ಶಾಸಕ ಎಚ್.ಆರ್.ಗವಿಯಪ್ಪ, ಎಚ್.ಎನ್.ಎಫ್.ಇಮಾಮ್ ನಿಯಾಜಿ, ರಾಜಶೇಖರ್ ಹಿಟ್ನಾಳ್ ಇದ್ದರು.