

ವಿಜಯಪುರ: ಗಾಂಧಿ ಕಟ್ಟಿದ ಕಾಂಗ್ರೆಸ್ ಈಗ ಇಲ್ಲ. ಸ್ವಾತಂತ್ರ್ಯ ಕ್ಕಾಗಿ ಹುಟ್ಟಿಕೊಂಡ ಕಾಂಗ್ರೆಸ್ ಸ್ವಾತಂತ್ರ್ಯ ನಂತರ ವಿಸರ್ಜನೆ ಮಾಡಿ ಎಂದಿದ್ದರು. ಆದರೆ, ಅವರ ಮಾತು ಧಿಕ್ಕರಿಸಿ ದೇಶವನ್ನು ದುಃಸ್ಥಿತಿಗೆ ತಂದಿರುವುದು ಕಾಂಗ್ರೆಸ್ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದರು.
ತಾಂಬಾ ಗ್ರಾಮದಲ್ಲಿ ಗುರುವಾರ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ದುರಾಡಳಿತದ ಪರಿಣಾಮ ಕಾಂಗ್ರೆಸ್ ಇಂದು ಅಧೋಗತಿಗೆ ಇಳಿದಿದೆ. ಪ್ರಧಾನಿ ಮೋದಿ ಅವರ ಬಗ್ಗೆ ಹಗುರವಾಗಿ ಮಾತನಾಡುತ್ತಿದೆ. ಹೀಗಾಗಿ ಕಾಂಗ್ರೆಸ್ ಗೆ ಪಾಠ ಕಲಿಸಬೇಕೆಂದರು.
ಕಾಂಗ್ರೆಸ್ ಮುಳುಗುವ ಹಡಗು. ಈ ದೇಶದ ಯಾವ ಭಾಗದಲ್ಲಿ ಕಾಂಗ್ರೆಸ್ ಇದೆ. ಅದರ ನಾಯಕ ಯಾರು? ಎಂಬುದರ ಬಗ್ಗೆ ಅವರಿಗೇ ಗೊತ್ತಿಲ್ಲ. ಇಂಥ ಪಕ್ಷ ಬೇಕಾ?
ಇಡೀ ಜಗತ್ತಿನ ಎಲ್ಲ ದೇಶಗಳು ಅಭಿಮಾನದಿಂದ ಕಾಣುತ್ತಿರುವ ಬಿಜೆಪಿ ಬೇಕಾ? ಎಂದು ಪ್ರಶ್ನಿಸಿದರು.
ಕಿಸಾನ್ ಸಮ್ಮಾನ್, ಭಾಗ್ಯ ಲಕ್ಷ್ಮಿ ಯೋಜನೆ ಜಾರಿಗೆ ತಂದಿದ್ದು ಬಿಜೆಪಿ. ಮಹಿಳಾ ಸಬಲೀಕರಣಕ್ಕೆ ಒತ್ತು ಕೊಟ್ಟಿರುವುದು ಬಿಜೆಪಿ. ಬಡವರಿಗೆ ಪಡಿತರ ಉಚಿತವಾಗಿ ನೀಡಿದ್ದು ಬಿಜೆಪಿ. ಸಿದ್ದರಾಮಯ್ಯ ಅವರು ಏಳು ಕೆಜಿ ಅಕ್ಕಿಯನ್ನು ಐದು ಕೆಜಿಗೆ ಇಳಿಸಿದ್ದಾರೆಂದು ಆರೋಪಿಸುತ್ತಾರೆ. ಈ ಹಿಂದೆ ಏಳು ಕೆಜಿ ಅಕ್ಕಿ ಕೊಟ್ಟಿರುವುದು ಸಹ ಬಿಜೆಪಿ, ಇಂದು ಐದು ಕೆಜಿ ಅಕ್ಕಿ ಕೊಡುತ್ತಿರುವುದು ಸಹ ಬಿಜೆಪಿ. ಅಕ್ಕಿ ಕಡಿಮೆ ಮಾಡಿದಾಗ ಅದರ ಬದಲು ಪರ್ಯಾಯ ಸೌಲಭ್ಯ ಹೆಚ್ಚಿಸಿದ್ದು ಸಹ ಬಿಜೆಪಿ ಎಂದರು.
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರಜೆಗಳೇ ಮಾಲೀಕರು. ನಮ್ಮ ಆಡಳಿತದಲ್ಲಿ ನಾವೇನು ಸಾಧನೆ ಮಾಡಿದ್ದೇವೆ ಎಂಬುದು ಪ್ರಜೆಗಳ ಮುಂದೆ ಪ್ರಸ್ತುತ ಪಡಿಸುವುದು ಒಂದು ಪದ್ಧತಿ. ಅದರಂತೆ ಇಲ್ಲಿನ ಸಮಸ್ಯೆ ಅರಿತು ಚುನಾವಣೆ ಮುಗಿಯುತ್ತಿದ್ದಂತೆ ಅವುಗಳನ್ನು ಪರಿಹರಿಸುವ ಕೆಲಸ ನಮ್ಮ ಸರ್ಕಾರ ಮಾಡುತ್ತದೆ. ಕೊಟ್ಟ ಭರವಸೆ ಈಡೇರಿಸುತ್ತೇವೆ ಎಂದರು.
ಸಚಿವ ಸಿ.ಸಿ. ಪಾಟೀಲ ಮಾತನಾಡಿ, ಬಿ.ಎಸ್. ಯಡಿಯೂರಪ್ಪ ಅವಧಿಯಲ್ಲಿ ಪ್ರವಾಹ ಹಾಗೂ ಕರೊನಾ ಮಹಾಮಾರಿ ಆವರಿಸಿತು. ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯಾದ್ಯಂತ ಸಂಚರಿಸಿ ಪರಿಹಾರ ನೀಡಿದವರು ಯಡಿಯೂರಪ್ಪ ಅವರು.
ವಿಭೂತಿಹಳ್ಳಿ ಹಾಗೂ ಸುತ್ತಲಿನ ಹಳ್ಳಿಗಳನ್ನು ಸ್ಥಳಾಂತರಿಸಿ ಮನೆಗಳನ್ನು ಕಟ್ಟಿಕೊಟ್ಟು ಪರಿಹಾರ ಕಲ್ಪಿಸಿದವರು ಯಡಿಯೂರಪ್ಪ ಅವರು. ಅಷ್ಟೇ ಅಲ್ಲ ಭೀಮಾತೀರದ ತಾರಾಪುರ ಪ್ರತೀ ಮಳೆಗಾಲದಲ್ಲಿ ನಡುಗಡ್ಡೆಯಾಗಿ ಪರಿಣಮಿಸುತ್ತಿತ್ತು. ಆ ಗ್ರಾಮ ಸ್ಥಳಾಂತರಿಸಿ ಅಲ್ಲಿನ ನಿವಾಸಿಗಳಿಗೆ ಹಕ್ಕು ಪತ್ರ ನೀಡಿದ್ದು ಬಿ.ಎಸ್. ಯಡಿಯೂರಪ್ಪ ಸರ್ಕಾರ ಎಂದು ಹೆಮ್ಮೆಯಿಂದ ನುಡಿದರು. ಕಷ್ಟ ಕಾಲದಲ್ಲಿ ಜನರಿಗೆ ನೆರವಾದ ಪಕ್ಷ ಬಿಜೆಪಿ ಎಂದರು.
ಸಚಿವ ಗೋವಿಂದ ಕಾರಜೋಳ ಮಾತನಾಡಿ, ಕೃಷಿಕರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಕೊಟ್ಟವರು ಯಡಿಯೂರಪ್ಪ, ಹಾಲಿನ ಉತ್ಪಾದನೆ ಹೆಚ್ಚಿಸಲು ಪ್ರೋತ್ಸಾಹ ಧನ ಕೊಟ್ಟವರು ಯಡಿಯೂರಪ್ಪ. ಅನ್ನ ಭಾಗ್ಯದ ಅಕ್ಕಿ ಮೋದಿ ಅವರದ್ದು, ತಟ್ಟಿನ ಚೀಲ ಮಾತ್ರ ಸಿದ್ದರಾಮಯ್ಯ ಅವರದ್ದು ಎಂದರು.
ದಲಿತರು, ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ನಿಂದ ಅನ್ಯಾಯ ಆಗಿದೆ ವಿನಃ ಬಿಜೆಪಿಯಿಂದ ಅಲ್ಲ ಎಂದರು.
ಅಬ್ದುಲ್ ಕಲಾಂ ಅವರನ್ನು ರಾಷ್ಟ್ರಪತಿ ಮಾಡಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ ಎಂದರು.
ದಲಿತರು ಹಾಗೂ ಮುಸ್ಲಿಂರನ್ನು ಭಯದ ವಾತಾವರಣದಲ್ಲಿ ಇರಿಸಿ ದೇಶ ಆಳಿದ್ದು ಕಾಂಗ್ರೆಸ್ ಎಂದರು.
ದೇಶದ 26 ರಾಜ್ಯಗಳಲ್ಲಿ ಬಿಜೆಪಿ ಆಡಳಿತವಿದೆ. ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಕಾಂಗ್ರೆಸ್ ಮೂಲೆ ಗುಂಪಾಗಿದೆ ಎಂದರು.
ರಾಜಕೀಯ ಸಂಸ್ಕೃತಿ ಗೊತ್ತಿಲ್ಲದ ಕಾಂಗ್ರೆಸ್ ಮೋದಿ ಬಗ್ಗೆ ಟೀಕೆ ಮಾಡುತ್ತಿದೆ. ಬಾಬಾಸಾಹೇಬ ಅಂಬೇಡ್ಕರ್ ಗೆ ಸೋಲಿಸಿದ ಕಾಂಗ್ರೆಸ್ ಈ ದೇಶದ ಜನರ ಕ್ಷಮೆ ಯಾಚಿಸಬೇಕು ಎಂದರು.
ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಮಾತನಾಡಿ, ಕೇಂದ್ರದಲ್ಲಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವಾಗ ಸಿಂದಗಿಯಲ್ಲಿ ಬೇರೆ ಪಕ್ಷದ ಆಡಳಿತ ಬೇಕಾ? ಎಂದು ಪ್ರಶ್ನಿಸಿದರು.
ತಳವಾರ ಮತ್ತು ಪರಿವಾರ ಸಮುದಾಯವನ್ನು ಎಸ್ ಟಿಗೆ ಸೇರ್ಪಡೆ ಮಾಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಸಿಎಂ ಬೊಮ್ಮಾಯಿ ಕೂಡ ತಳವಾರ ಸಮುದಾಯದ ಮುಖಂಡರ ಸಭೆ ನಡೆಸಿದ್ದಾರೆ ಎಂದರು.
ತಾಂಬಾ ತಾಲೂಕು ಮಾಡುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಗಮನ ಹರಿಸಲಿದೆ ಎಂದರು.
ಅಭ್ಯರ್ಥಿ ರಮೇಶ ಭೂಸನೂರ ಮಾತನಾಡಿ, ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಯಡಿ ಎಂಟು ಮೋಟಾರ್ ವ್ಯವಸ್ತೆ ಕಲ್ಪಿಸಿ ನೀರಾವರಿಗೆ ಅವಕಾಶ ಕಲ್ಪಿಸಬೇಕಂದರು. ಆಲಮಟ್ಟಿ ಹಿನ್ನೀರಿನಲ್ಲಿ ಪಂಪ್ ಮಾಡಿ ಚಿಕ್ಕರೂಗಿ ಭಾಗಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರಲ್ಲಿ ಮನವಿ ಮಾಡಿದರು.
ಮಾಜಿ ಸಿಎಂ ಜಗದೀಶ ಶೆಟ್ಟರ್,
ಸಚಿವರಾದ ವಿ. ಸೋಮಣ್ಣ, ಎಂಟಿಬಿ ನಾಗರಾಜ,
ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಮಾತನಾಡಿದರು.
ಶಾಸಕ ಬಸವರಾಜ ಮತ್ತಿಮಡ,
ವಿಪ ಸದಸ್ಯ ಹಣಮಂತ ನಿರಾಣಿ, ರಾಜ್ಯ ಬೀಜ ಹಾಗೂ ಸಾವಯವ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ, ಮುಖಂಡರಾದ ಎಸ್.ಕೆ.ಬೆಳ್ಳುಬ್ಬಿ, ದಯಾಸಾಗರ ಪಾಟೀಲ, ಉಮೇಶ ಕೋಳಕೂರ, ವಿವೇಕಾನಂದ ಡಬ್ಬಿ, ಪ್ರತಾಪಗೌಡ ಪಾಟೀಲ ಮತ್ತಿತರರಿದ್ದರು.