

ಮೈಸೂರು: ಇಂದಿನ ದಿನಮಾನದಲ್ಲಿ ತಾಂತ್ರಿಕತೆ ಸಾಕಷ್ಟು ಅಭಿವೃದ್ಧಿಗೊಂಡಿದ್ದು, ಅವುಗಳನ್ನು ಬಳಸಿಕೊಂಡು ವೃತ್ತಿ ನೈಪುಣ್ಯತೆ ಸಾಧಿಸುವಂತೆ ಅರಸು ಮಂಡಳಿ ಅಧ್ಯಕ್ಷ ಎಚ್.ಎಂ.ಟಿ.ಲಿಂಗರಾಜೇ ಅರಸು ಅವರು, ನಲ್ಲಿ ಕೆಲಸ ಕಾರ್ಮಿಕರಿಗೆ ಸಲಹೆ ನೀಡಿದರು.
ಸರ್ ಎಂ.ವಿಶ್ವೇಶ್ವರಯ್ಯ ನಲ್ಲಿ ಮತ್ತು ಒಳಚರಂಡಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದಿಂದ ಭಾನುವಾರ ಸರಸ್ವತಿಪುರಂನಲ್ಲಿರುವ ರೋಟರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಶ್ವ ನಲ್ಲಿ ಕೆಲಸಗಾರರ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ತಾಂತ್ರಿಕತೆ ಯುಗದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಿವೆ. ಆದ್ದರಿಂದ ನಲ್ಲಿ ಕೆಲಸಗಾರರು ತಾಂತ್ರಿಕತೆಯ ಯುಗಕ್ಕೆ ತಕ್ಕಂತೆ ನೂತನ ಅವಿಷ್ಕಾರಗಳನ್ನು ಬಳಸಿಕೊಂಡು ಅವುಗಳಿಗೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳಬೇಕು. ಇದರಿಂದ ವೃತ್ತಿಯಲ್ಲಿಯೂ ನೈಪುಣ್ಯತೆ ಸಾಧಿಸಲು ಸಾಧ್ಯ ಎಂದು ಹೇಳಿದರು.
ಕೆಲಸ ಮಾಡುವ ಸ್ಥಳದಲ್ಲಿ ಸುರಕ್ಷತಾ ಕ್ರಮ ಅನುಸರಿಸಬೇಕು. ದುಡಿಯುವ ವರ್ಗ ಜೀವನ ತುಂಬಾ ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕು. ಸರ್ಕಾರದ ಯೋಜನೆಗಳನ್ನು ತಿಳಿದುಕೊಂಡು ಅದಕ್ಕೆ ತಕ್ಕಂತೆ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದ ಅವರು, ನಲ್ಲಿ ಕೆಲಸಗಾರರು ಸಂಘಟಿತರಾಗಿ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಸಾಲುಮರದ ತಿಮ್ಮಕ್ಕ ಮಾತನಾಡಿ, ನನಗೆ ಮಕ್ಕಳಿಲ್ಲದಿದ್ದರಿಂದ ಅದರಿಂದ ಬೇಸರಪಟ್ಟುಕೊಳ್ಳದೆ ಸಸಿಗಳನ್ನೇ ಮಕ್ಕಳು ಎನ್ನುವಂತೆ ಬೆಳೆಸಿ ಮರ ಮಾಡಿದೆ. ಅವು ಬೆಳೆದು ಇತರರಿಗೆ ನೆರಳಾಗಿವೆ. ಅದಕ್ಕೆ ಹೆಸರು ಬಂದಿದೆ. ಆದ್ದರಿಂದ ಎಲ್ಲರೂ ಮರ ಬೆಳೆಸಿ ಪರಿಸರ ಕಾಪಾಡಬೇಕು. ನಿಮ್ಮ ಆತ್ಮ ತೃಪ್ತಿಗೆ ಒಪ್ಪುವಂತಹ ಕೆಲಸ ಮಾಡಬೇಕು ಎಂದು ಹೇಳಿದರು.
ಚುಟುಕು ಸಾಹಿತ್ಯ ಪರಿಷತ್ ಸಂಸ್ಥಾಪಕ ಡಾ.ಎಂ.ಜಿ.ಆರ್.ಅರಸ್ ಮಾತನಾಡಿದರು. ಕಾರ್ಮಿಕ ಇಲಾಖೆ ನಿರೀಕ್ಷಕ ರವಿ ಕುಮಾರ್, ಸಂಘದ ಅಧ್ಯಕ್ಷ ಎಸ್.ಮಹೇಶ್, ಉಪಾಧ್ಯಕ್ಷ ಎಂ.ಎಸ್.ಸುರೇಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ರವಿಕುಮಾರ್, ಜಂಟಿ ಕಾರ್ಯದರ್ಶಿ ಎಸ್.ಪಳನಿ, ಖಜಾಂಚಿ ಎಂ.ಪ್ರಕಾಶ್, ಬಸವರಾಜ್ ಇತರರಿದ್ದರು.
ನಲ್ಲಿ ಕೆಲಸಗಾರರಾದ ಎಚ್.ಬಿ.ರಮೇಶ್, ಎಚ್.ಕೆಂಪೇಗೌಡ, ಎಚ್.ಕೆ.ಚಂದ್ರಪ್ಪ, ಮಹದೇವಪ್ಪ, ಕೆ.ಎಲ್.ಬಸವರಾಜು, ನಂಜುಂಡಸ್ವಾಮಿ, ಪೀರ್ ಬೇಗ್, ಸ್ವಾಮಿ, ಮಹದೇವ, ವೆಂಕಟೇಶ್, ಎಂ.ಎಸ್.ಶ್ರೀಧರ್, ಸಿ.ಮಹದೇವು ಅವರಿಗೆ ನಲ್ಲಿ ಕೆಲಸದ ನಕ್ಷತ್ರ ಬಿರುದು ನೀಡಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಸಂಘದ ಸದಸ್ಯರು ಹಾಗೂ ಕುಟುಂಬದವರಿಗೆ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.