ತಾಂತ್ರಿಕ ಸಹಾಯಕ ಸೇವೆಯಿಂದ ವಜಾ

SALMAN KHAN
Published on

ಹನೂರು: ನರೇಗಾ ಯೋಜನೆಯಡಿ ಕೆರೆ ಹಾಗೂ ಇನ್ನಿತರೆ ಅಭಿವೃದ್ಧಿ ಕಾಮಗಾರಿಗಳಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಹಣ ದುರುಪಯೋಗ ಪಡಿಸಿಕೊಂಡಿದ್ದ ಹನೂರು ತಾಲೂಕು ಪಂಚಾಯಿತಿ ಹೊರಗುತ್ತಿಗೆ ತಾಂತ್ರಿಕ ಸಹಾಯಕ ಮಹಮದ್ ಸಲ್ಮಾನ್ ಖಾನ್ ಅವರನ್ನು ಜಿಪಂ ಸಿಇಒ ಪೂವಿತಾ ಶುಕ್ರವಾರ ಸೇವೆಯಿಂದ ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ.
2016-17 ರಿಂದ 2021-22ನೇ ಸಾಲಿನವರೆಗೆ ಕೈಗೊಂಡ ಕೆರೆ ಅಭಿವೃದ್ಧಿ, ರಸ್ತೆ ನಿರ್ಮಾಣ, ಚೆಕ್ ಡ್ಯಾಂನಲ್ಲಿ ಹೂಳೆತ್ತುವ ಕಾಮಗಾರಿ ಇನ್ನಿತರೆ ಕಾಮಗಾರಿಗಳಲ್ಲಿ ಕೆಲಸ ನಿರ್ವಹಿಸದೇ ನಕಲಿ ಬಿಲ್ ಸೃಷ್ಟಿಸಿ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದರು. ಈ ಬಗ್ಗೆ ಒಂಬುಡ್ಸ್‌ಮನ್ ನ್ಯಾಯಾಲಯದಲ್ಲಿ ಇವರ ವಿರುದ್ಧ ದೂರುಗಳು ದಾಖಲಾಗಿತ್ತು. ಈ ಸಂಬಂಧ ಹನೂರು ತಾಪಂ ಇಒ ನರೇಗಾ ಯೋಜನೆಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಖಾನ್ ಹಣ ದುರುಪಯೋಗ ಪಡಿಸಿಕೊಂಡಿರುವ ಬಗ್ಗೆ ಜಿಪಂಗೆ ವರದಿ ಸಲ್ಲಿಸಿದ್ದರು.
ಈ ಸಂಬಂಧ ಒಂಬುಡ್ಸ್‌ಮನ್ ನ್ಯಾಯಾಲಯ ಪ್ರಕರಣಗಳ ದಾಖಲೆಗಳನ್ನು ಪರಿಶೀಲಿಸಿದಾಗ ಹನೂರು ತಾಲೂಕಿನ ಹೂಗ್ಯಂ ಗ್ರಾಪಂ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಕೈಗೊಂಡ ಕಾಮಗಾರಿಗಾಗಿ 10,244 ರೂ, ಮಾರ್ಟಳ್ಳಿ ಗ್ರಾಪಂನಲ್ಲಿ 4,23,664 ರೂ, ದಿನ್ನಳ್ಳಿಯಲ್ಲಿ 1,69,502 ರೂ, ದೊಡ್ಡಲತ್ತೂರಿನಲ್ಲಿ 74,803 ರೂ, ಗೋಪಿನಾಥಂನಲ್ಲಿ 4,05,190 ರೂ, ಮಹದೇಶ್ವರ ಬೆಟ್ಟದಲ್ಲಿ 51,425 ರೂ, ಯಳಂದೂರು ತಾಲೂಕಿನ ಗುಂಬಳ್ಳಿ ಗ್ರಾಪಂನಲ್ಲಿ 2,07,757 ರೂ, ಬಿಳಿಗಿರಿರಂಗನ ಬೆಟ್ಟದಲ್ಲಿ 37,818 ರೂ, ಗೌಡಹಳ್ಳಿಯಲ್ಲಿ 8,466 ರೂ. ಹಾಗೂ ಗುಂಡ್ಲುಪೇಟೆ ತಾಲೂಕಿನ ಶಿಂಡನಪುರ ಗ್ರಾಪಂನಲ್ಲಿ 55,921 ರೂ, ತೆರಕಣಾಂಬಿಯಲ್ಲಿ 20,625 ರೂ ಸೇರಿದಂತೆ ಒಟ್ಟು 14,65,415 ರೂ ಹಣ ದುರುಪಯೋಗ ಪಡಿಸಿಕೊಂಡಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಅವರನ್ನು ಸೇವೆಯಿಂದ ವಜಾಗೊಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net