ತಾಂತ್ರಿಕ ಕೌಶಲ ಪಡೆದುಕೊಳ್ಳಲು ಸಚಿವ ಡಾ. ಅಶ್ವತ್ಥನಾರಾಯಣ ಕರೆ

GTTC
Published on

ಹುಬ್ಬಳ್ಳಿ: ಯುವಕರು ಶೈಕ್ಷಣಿಕ ವಿದ್ಯಾರ್ಹತೆ ಜತೆಗೆ ತಾಂತ್ರಿಕ ಕೌಶಲ ಪಡೆದುಕೊಳ್ಳಬೇಕು ಎಂದು ಉನ್ನತ ಶಿಕ್ಷಣ, ಐಟಿ ಬಿಟಿ ಸಚಿವ ಡಾ. ಸಿ. ಎನ್. ಅಶ್ವತ್ಥನಾರಾಯಣ ಹೇಳಿದರು.

ಹುಬ್ಬಳ್ಳಿಯಲ್ಲಿ ಮಂಗಳವಾರ ಸರ್ಕಾರಿ ಉಪಕರಣಾಗಾರ ತರಬೇತಿ ಕೇಂದ್ರದ ಬಹು ಕೌಶಲಾಭಿವೃದ್ಧಿ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಪತ್ರಿಯೊಬ್ಬರೂ ತಾಂತ್ರಿಕ ಕೌಶಲ ಪಡೆದು ಪ್ರಗತಿಪರ ಸಮಾಜ ನಿರ್ಮಾಣ ಮಾಡಲು ಮುಂದಾಗಬೇಕು ಎಂದರು.

5000 ಕೋಟಿ ರೂ. ಖರ್ಚು ಮಾಡಿ ರಾಜ್ಯದ 150 ಐಟಿಐ ಉನ್ನತೀಕರಣಗೊಳಿಸಿದ್ದೇವೆ. ಈ ವರ್ಷ ಇನ್ನು 30 ಐಟಿಐ ಗಳನ್ನು ಉನ್ನತೀಕರಣಗೊಳಿಸುತ್ತೇವೆ. ಪಾಲಿಟೆಕ್ನಿಕ್​ಗಳಲ್ಲಿ ಸಾಕಷ್ಟು ಸುಧಾರಣೆ ತಂದಿದ್ದೇವೆ. ಪಾಲಿಟೆಕ್ನಿಕ್ ಶಿಕ್ಷಣದ ಪಠ್ಯಕ್ರಮದಲ್ಲಿ ಬದಲಾವಣೆ ಮಾಡಿದ್ದೇವೆ ಎಂದು ತಿಳಿಸಿದರು.

ಮಾಜಿ ಸಿಎಂ ಜಗದೀಶ ಶೆಟ್ಟರ್, ಉತ್ತರ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ವಿವಿಧ ಕೌಶಲ ಹಾಗೂ ತಾಂತ್ರಿಕ ಶಿಕ್ಣಣ ಪಡೆಯಲು ಬಹು ಕೌಶಲಾಭಿವೃದ್ಧಿ ಕೇಂದ್ರದಿಂದ ಅನುಕೂಲವಾಗಲಿದೆ. ಇದು ಪ್ರಧಾನಿ ಮೋದಿ ಅವರ ಸ್ಕಿಲ್ ಇಂಡಿಯಾ ಉಪಕ್ರಮಕ್ಕೆ ಪೂರಕವಾಗಿದೆ ಎಂದರು.

ಇಂದು ರಾಜಧಾನಿ ಬೆಂಗಳೂರು ಬಿಟ್ಟು ಹೊರಗೆ 2ನೇ ಸ್ತರದ ನಗರಗಳಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗುತ್ತಿವೆ. ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಜಿಮ್ 9.80 ಲಕ್ಷ ಕೋಟಿ ರೂ. ಬಂಡವಾಳ ಆಕರ್ಷಿಸಿದೆ. ಮುಮ್ಮಿಗಟ್ಟಿಯಲ್ಲಿ ಉದ್ಘಾಟನೆಯಾಗಿರುವ ಎಫ್​ಎಂಸಿಜಿ ಕ್ಲಸ್ಟರ್ ಬರುವ ದಿನಗಳಲ್ಲಿ 1 ಲಕ್ಷ ಉದ್ಯೋಗ ಸೃಷ್ಟಿಸಲಿದೆ. ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಧಾರವಾಡ ಮತ್ತು ತುಮಕೂರು ಜಿಲ್ಲೆಯಲ್ಲಿ ಎಸ್​ಐಆರ್ (ವಿಶೇಷ ಹೂಡಿಕೆ ವಲಯ) ಸ್ಥಾಪನೆ ಮಾಡುವ ಕುರಿತು ಹೊಸ ನೀತಿ ಮಂಡನೆಯಾಗಲಿದೆ ಎಂದು ಹೇಳಿದರು.

ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ವಿನಯ ಜವಳಿ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಮಾಜಿ ಸದಸ್ಯ ಮಹೇಶ ಬುರ್ಲಿ, ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಮಾಜಿ ಅಧ್ಯಕ್ಷರಾದ ನಾಗರಾಜ ದಿವಟೆ, ನಿಂಗಣ್ಣ ಬಿರಾದಾರ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net