

ಲಕ್ಷ್ಮೇಶ್ವರ: ಸ್ವಾತಂತ್ರ್ಯ ಬಂದು 7 ದಶಕ ಕಳೆದಿದ್ದರೂ ಲಂಬಾಣಿ ತಾಂಡಾಗಳು ಅಭಿವೃದ್ಧಿ ಕಂಡಿಲ್ಲ. ಇದುವರೆಗೂ ರಾಜ್ಯವನ್ನಾಳಿದ ಎಲ್ಲ ಪಕ್ಷಗಳು ತಾಂಡಾ ಜನರ ಜೀವನಮಟ್ಟ ಸುಧಾರಿಸಿಲ್ಲ ಎಂದು ಗೋರ ಬಂಜಾರ ಕ್ರಾಂತಿ ಸಂಘದ ಅಧ್ಯಕ್ಷ ವಿಜಯ ಜಾಧವ ಆರೋಪಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ತಾಲೂಕು ಮಟ್ಟದ ಗೋರ ಬಂಜಾರ ಸಮಾಜದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು. ‘ಸಮಾಜವು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ತೀರಾ ಹಿಂದುಳಿದಿದೆ. ರಾಜ್ಯದಲ್ಲಿ ಸುಮಾರು 25-30 ಲಕ್ಷ ಬಂಜಾರ ಸಮಾಜದ ಬಾಂಧವರಿದ್ದು ಒಟ್ಟು 3300 ಲಂಬಾಣಿ ತಾಂಡಾಗಳಿವೆ. ಈ ಪೈಕಿ ಕೇವಲ 550 ತಾಂಡಾಗಳನ್ನು ಮಾತ್ರ ಕಂದಾಯ ಗ್ರಾಮಗಳನ್ನಾಗಿ ಮಾಡಲಾಗಿದೆ. ಇನ್ನುಳಿದ ತಾಂಡಾಗಳ ಅಭಿವೃದ್ಧಿ ಮರಿಚೀಕೆಯಾಗಿದ್ದು, ಉಳಿದೆಲ್ಲ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿಸುವ ಮೂಲಕ ತಾಂಡಾಗಳ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದರು.
ತಾಂಡಾದ ಜನರು ಆರ್ಥಿಕವಾಗಿ ಹಿಂದುಳಿದಿದ್ದು, ಬದುಕು ಕಟ್ಟಿಕೊಳ್ಳಲು ಗುಳೆ ಹೋಗುತ್ತಿರುವುದರಿಂದ ಅವರ ಮಕ್ಕಳ ಶಿಕ್ಷಣ ಕುಂಠಿತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಲಂಬಾಣಿ ಮಕ್ಕಳಿಗೆ ವಸತಿ ಸಹಿತಿ ಶಿಕ್ಷಣ ನೀಡಲು ಸರ್ಕಾರ ಆದ್ಯತೆ ನೀಡಬೇಕು. ಅಲ್ಲದೆ, ಗುಳೆ ತಪ್ಪಿಸಲು ವರ್ಷದಲ್ಲಿ 300 ಮಾನವ ದಿನಗಳನ್ನು ಸೃಷ್ಟಿಸಿ ನರೇಗಾ ಯೋಜನೆಯಡಿ ಕೆಲಸ ನೀಡಬೇಕು. ಲಂಬಾಣಿ ಸಮಾಜ ದಯನೀಯ ಸ್ಥಿತಿಯಲ್ಲಿದ್ದು ಅದನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂದರು.
ತಾಲೂಕಾಧ್ಯಕ್ಷ ನಾಗರಾಜ ಲಮಾಣಿ, ತೇಜಪ್ಪ ಲಮಾಣಿ, ಬಾಬಣ್ಣ ಲಮಾಣಿ, ತಿಪ್ಪಣ್ಣ ಲಮಾಣಿ, ಮಂಜು ಲಮಾಣಿ, ಗಿರೀಶ ಲಮಾಣಿ, ರಮೇಶ ಲಮಾಣಿ, ಮೋತಿ ಲಮಾಣಿ, ಆನಂದ ಲಮಾಣಿ, ಅನಿಲ ಲಮಾಣಿ, ಮಹೇಶ ಲಮಾಣಿ, ಮಂಜು ಲಮಾಣಿ, ಶಿವು ಲಮಾಣಿ, ಲಕ್ಷ್ಮಣ ಲಮಾಣಿ, ನಿಂಗಪ್ಪ ಲಮಾಣಿ, ರಾಜು ಲಮಾಣಿ ಇತರರಿದ್ದರು.