ತಹಸೀಲ್ದಾರ್‌ಗೆ ಕೊಲೆ ಬೆದರಿಕೆ ಹಾಕಿದವರ ಸೆರೆ

AC
Published on

ಗೋಮಾಳ ವೀಕ್ಷಣೆಗೆ ತೆರಳಿದ್ದಾಗ ದೌರ್ಜನ್ಯ ಗ್ರಾಪಂ ಸದಸ್ಯ ಸೇರಿ ಮೂವರ ಬಂಧನ

ಸೂಲಿಬೆಲೆ: ಸರ್ಕಾರಿ ಗೋಮಾಳ ವೀಕ್ಷಣೆಗೆ ತೆರಳಿದ್ದ ಹೊಸಕೋಟೆ ತಹಸೀಲ್ದಾರ್ ಸೋಮಶೇಖರ್ ಅವರ ಸರ್ಕಾರಿ ವಾಹನ ಅಡ್ಡಗಟ್ಟಿ ಹಲ್ಲೆ ಯತ್ನ ಮಾಡಿದ್ದಲ್ಲದೆ ಹಾಗೂ ಕೊಲೆ ಬೆದರಿಕೆ ಹಾಕಿದ ಆರೋಪದಡಿ ಸೂಲಿಬೆಲೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ತೆನೆಯೂರು ಗ್ರಾಮದ ಗ್ರಾಪಂ ಸದಸ್ಯ ಶಶಿಕಿರಣ್(40), ಮುನಿರಾಜು(35), ಮಂಜುನಾಥ್(37) ಬಂಧಿತರು.

ಬಗುರ್‌ಹುಕುಂ ಕಮಿಟಿಯಲ್ಲಿ ನಮೂನೆ 53 ಅರ್ಜಿ ಸಲ್ಲಿಸಿ ಸ.ನಂ 20ರಲ್ಲಿರುವ ಸರ್ಕಾರಿ ಭೂಮಿಯಲ್ಲಿ ಸ್ವಾಧೀನದಲ್ಲಿರುವ ರೈತರ ಜಮೀನು ಪರಿಶೀಲಿಸಲು ಏ.17ರ ಸಂಜೆ 5.30 ಗಂಟೆಗೆ ತೆನೆಯೂರಿಗೆ ತಹಸೀಲ್ದಾರ್ ಅವರು ಸೂಲಿಬೆಲೆ ಹಾಗೂ ಬೆಂಡಿಗಾನಹಳ್ಳಿ ನಾಡಕಚೇರಿ ಅಧಿಕಾರಿಗಳೊಂದಿಗೆ ಹೋಗಿದ್ದ ಸಮಯದಲ್ಲಿ ಅದೇ ಸ.ನಂಬರ್‌ನಲ್ಲಿ ಮಣ್ಣು ತೆಗೆದು ಕಾಂಪೌಂಡ್ ನಿರ್ಮಿಸಿಕೊಂಡಿರುವ ಶಶಿಕಿರಣ್ ಹಾಗೂ ಇಬ್ಬರು ಹುಡುಗರು ಟ್ರ್ಯಾಕ್ಟರ್ ಚಲಾಯಿಸಿಕೊಂಡು ಬಂದು ತಹಸೀಲ್ದಾರ್ ಅವರಿಗೆ ಗುದ್ದಲು ಬಂದರು. ಇದನ್ನು ಗಮನಿಸಿ ತಕ್ಷಣ ತಹಸೀಲ್ದಾರ್ ಅವರನ್ನು ಪಕ್ಕಕ್ಕೆ ಎಳೆದುಕೊಂಡೆವು. ನಂತರ ಆ ಮೂವರೂ ಮಣ್ಣು ತೆಗೆದು ಕಾಂಪೌಂಡ್ ನಿರ್ಮಿಸುತ್ತಿರುವುದು ನಾವೇ ಎಂದು ದರ್ಪದಿಂದ ತಹಸೀಲ್ದಾರ್ ಜೀಪನ್ನು ಅಡ್ಡಗಟ್ಟಿ, ಅವಾಚ್ಯವಾಗಿ ನಿಂದಿಸಿ ದೌರ್ಜನ್ಯ ಎಸಗಿದ್ದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಸೂಲಿಬೆಲೆ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು, ಟ್ರ್ಯಾಕ್ಟರ್‌ನಿಂದ ಗುದ್ದಿ ಕೊಲೆ ಮಾಡಲು ಯತ್ನ, ಸರ್ಕಾರಿ ಕೆಲಸಕ್ಕೆ ಅಡ್ಡಿ, ಅವಾಚ ನಿಂದನೆ ಮಾಡಿದ ಆರೋಪದ ಮೇಲೆ ಹಾಗೂ ಸರ್ಕಾರಿ ಜಮೀನಿನಲ್ಲಿ ಗಣಿಗಾರಿಕೆ ಮಾಡುತ್ತಿರುವ ಶಶಿಕಿರಣ್ ಹಾಗೂ ಇತರ ಇಬ್ಬರ ವಿರುದ್ಧ ಕ್ರಮ ಜರುಗಿಸುವಂತೆ ಸೂಲಿಬೆಲೆ ನಾಡಕಚೇರಿ ರೆವಿನ್ಯೂ ಇನ್‌ಸ್ಪೆಕ್ಟರ್ ನ್ಯಾನಮೂರ್ತಿ ಸೂಲಿಬೆಲೆ ಪೊಲೀಸರಿಗೆ ದೂರು ನೀಡಿದ್ದರು.

ಈ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂವರನ್ನು ಬಂಧಿಸಿ ಟ್ರ್ಯಾಕ್ಟರ್‌ನ್ನು ಜಪ್ತಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net