

ಪಾಂಡವಪುರ: ತಾಲೂಕಿನ ನೂತನ ತಹಸೀಲ್ದಾರ್ ಆಗಿ ಎಸ್.ಸಂತೋಷ್ ಗುರುವಾರ ಅಧಿಕಾರ ವಹಿಸಿಕೊಂಡರು.
ಸಂತೋಷ್ ಅವರು ಈ ಹಿಂದೆ ಕೆ.ಆರ್.ನಗರದ ತಹಸೀಲ್ದಾರ್ ಆಗಿ ಸೇವೆ ಸಲ್ಲಿಸಿದ್ದರು. ಪಾಂಡವಪುರ ತಾಲೂಕಿನ ಈ ಹಿಂದಿನ ತಹಸೀಲ್ದಾರ್ ಕೆ.ಸಿ.ಸೌಮ್ಯಾ ಅವರು ಜೂ.22 ರಂದು ಲಂಚ ಪ್ರಕರಣವೊಂದರಲ್ಲಿ ಲೋಕಾಯುಕ್ತ ಬಲೆಗೆ ಸಿಲುಕಿ ಜೈಲು ಪಾಲಾದ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಿನಿಂದ ತಾಲೂಕಿನ ತಹಸೀಲ್ದಾರ್ ಹುದ್ದೆ ಖಾಲಿ ಇತ್ತು. ಹಿಂದಿನ ತಹಸೀಲ್ದಾರ್ ಕಚೇರಿ ಸಿಬ್ಬಂದಿಯಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿದ್ದರಿಂದ ತಾಲೂಕಿಗೆ ಬರಲು ಹೊಸ ತಹಸೀಲ್ದಾರ್‌ಗಳು ಹಿಂಜರಿಯುತ್ತಿದ್ದರು.
ಪಾಂಡವಪುರ ತಾಲೂಕಿಗೆ ಎರಡು ತಿಂಗಳು ಕಳೆದರೂ ಕಾಯಂ ತಹಸೀಲ್ದಾರ್ ನೇಮಕವಾಗದೆ ರೈತಾಪಿ ವರ್ಗ ಮತ್ತು ಸಾರ್ವಜನಿಕರು ಅನುಭವಿಸುತ್ತಿದ್ದ ಸಮಸ್ಯೆಗಳ ಬಗ್ಗೆ ವಿಜಯವಾಣಿ ಆ.10 ರಂದು ತಹಸೀಲ್ದಾರ್ ಹುದ್ದೆ ಖಾಲಿ ಎಂಬ ಶೀರ್ಷಿಕೆಯಡಿ ಸುದ್ದಿ ಪ್ರಕಟಿಸಿ ಅಧಿಕಾರಿಗಳ ಗಮನ ಸೆಳೆದಿತ್ತು. ಪರಿಣಾಮ ಕಾಯಂ ತಹಸೀಲ್ದಾರ್ ನೇಮಕವಾಗಿರುವುದಕ್ಕೆ ಸಾರ್ವಜನಿಕರು ಪತ್ರಿಕೆಯ ಕಾಳಜಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.