

ಪಿರಿಯಾಪಟ್ಟಣ: ಹೊಟ್ಟೆಪಾಡಿಗಾಗಿ ಅಸ್ಸಾಂನಿಂದ ಕೂಲಿ ಕೆಲಸಕ್ಕೆ ಬಂದಿದ್ದ ಕಾರ್ಮಿಕರಿಗೆ ಗುಜರಿ ಮಾಲೀಕ ಹಣ ನೀಡದೆ ಪರಾರಿಯಾಗಿದ್ದು, ಹಸಿವಿನಿಂದ ಕಂಗೆಟ್ಟಿದ್ದ ಕಾರ್ಮಿಕರು ನೆರವಿಗಾಗಿ ಮಂಗಳವಾರ ತಹಸೀಲ್ದಾರ್ ಮೊರೆ ಹೋಗಿದ್ದಾರೆ.
ತಾಲೂಕಿನ ಪಂಚವಳ್ಳಿ ಗ್ರಾಮದಲ್ಲಿ ರಿಯಾಜ್ ಪಾಷಾ ಎಂಬಾತ ಗುಜರಿ ತೆರೆದು ವಹಿವಾಟು ನಡೆಸುತ್ತಿದ್ದು, ಗುಜರಿಯಲ್ಲಿ ಕೆಲಸ ಮಾಡಲು ದೂರದ ಅಸ್ಸಾಂನಿಂದ 9 ಮಹಿಳೆಯರು ಸೇರಿ 20ಕ್ಕೂ ಹೆಚ್ಚು ಕಾರ್ಮಿಕರಿಗೆ ಮುಂಗಡ ಹಣ ನೀಡಿ ಕರೆತಂದಿದ್ದ. ಅವರೊಂದಿಗೆ ಪುಟ್ಟ ಮಕ್ಕಳು ಸಹ ಇವೆ. ಕೂಲಿಕಾರ್ಮಿಕರು ಉಳಿದುಕೊಳ್ಳಲು ತಾಲೂಕಿನ ಪಂಚವಳ್ಳಿ ಸಮೀಪದ ಮುದ್ದನಹಳ್ಳಿ ಗ್ರಾಮದಲ್ಲಿ ಎರಡು ಬಾಡಿಗೆ ಮನೆ ಮಾಡಿಕೊಟ್ಟಿದ್ದು, ಪುರುಷರಿಗೆ 500 ರೂ. ಮತ್ತು ಮಹಿಳೆಯರಿಗೆ 400 ರೂ. ದಿನಗೂಲಿ ನೀಡುವುದಾಗಿ ತಿಳಿಸಿದ್ದ. ಆದರೆ ಎರಡು ತಿಂಗಳಿನಿಂದ ಸರಿಯಾಗಿ ಕೂಲಿ ಹಣ ನೀಡದೆ ಸತಾಯಿಸಿದ್ದಾನೆ. ಜು. 6ರಂದು ಗುಜರಿಯಲ್ಲಿದ್ದ ಪದಾರ್ಥಗಳನ್ನೆಲ್ಲ ಮಾರಾಟ ಮಾಡಿ, ಹಣ ತರುವುದಾಗಿ ತೆರಳಿದ್ದ ರಿಯಾಜ್ ಪಾಷಾ ವಾರವಾದರೂ ಹಿಂದಿರುಗಿಲ್ಲ. ಇದರಿಂದ ಊಟಕ್ಕೂ ಹಣವಿಲ್ಲದೆ ಪರದಾಡುತ್ತಿದ್ದ ಕೂಲಿಕಾರ್ಮಿಕರು ಜು.14ರಂದು ಪಿರಿಯಾಪಟ್ಟಣ ತಾಲೂಕು ಕಚೇರಿಗೆ ತೆರಳಿ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಮೌಖಿಕವಾಗಿ ದೂರು ನೀಡಿದ್ದರು. ಆದರೆ ಇವರ ದೂರನ್ನು ಗಂಭೀರವಾಗಿ ಪರಿಗಣಿಸದ ಕಾರ್ಮಿಕ ಇಲಾಖೆ ಸಿಬ್ಬಂದಿ, ಗ್ರಾಮಕ್ಕೆ ಬಂದು ಪರಿಶೀಲನೆ ನಡೆಸುವುದಾಗಿ ಹೇಳಿ ಕಾರ್ಮಿಕರನ್ನು ಅಲ್ಲಿಂದ ಸಾಗಹಾಕಿದ್ದರು.
ಕಾರ್ಮಿಕ ಇಲಾಖೆಯ ಸಿಬ್ಬಂದಿ ಭರವಸೆ ನಂಬಿ ಅಲ್ಲಿಂದ ತೆರಳಿದ್ದ ಕೂಲಿಕಾರ್ಮಿಕರು ಮೂರು ದಿನ ಕಳೆದರೂ ಯಾವುದೇ ಅಧಿಕಾರಿಗಳ ಸುಳಿವು ಇಲ್ಲದ್ದರಿಂದ ಮಹಿಳೆಯರು ಮತ್ತು ಮಕ್ಕಳೊಂದಿಗೆ ಮಂಗಳವಾರ ತಾಲೂಕು ಕಚೇರಿಗೆ ಆಗಮಿಸಿ ತಹಸೀಲ್ದಾರ್ ಅವರನ್ನು ಭೇಟಿಯಾಗಿ ಸಮಸ್ಯೆ ಹೇಳಿಕೊಂಡರು.
ಪ್ರಕರಣದ ಗಂಭೀರತೆ ಅರಿತ ತಹಸೀಲ್ದಾರ್ ಕುಂಇ ಅಹಮ್ಮದ್ ಕೂಡಲೇ ಕಾರ್ಮಿಕ ಇಲಾಖೆ ನಿರೀಕ್ಷಕರನ್ನು ತಮ್ಮ ಕಚೇರಿಗೆ ಕರೆಸಿಕೊಂಡು ಮಾಹಿತಿ ಪಡೆದರಲ್ಲದೆ, ಕಂದಾಯ ಅಧಿಕಾರಿ ಪಾಂಡುರಂಗ, ಪೊಲೀಸ್ ಇನ್ಸ್‌ಪೆಕ್ಟರ್ ಕೆ.ವಿ.ಶ್ರೀಧರ್ ಅವರನ್ನು ಸ್ಥಳಕ್ಕೆ ಕಳುಹಿಸಿ, ಮಾಹಿತಿ ಸಂಗ್ರಹಿಸಲು ಸೂಚಿಸಿದರು. ಅಲ್ಲದೆ, ಕೂಲಿಕಾರ್ಮಿಕರ ಹಸಿವು ನೀಗಿಸಲು ಕೂಡಲೇ 2 ಚೀಲ ಅಕ್ಕಿ ನೀಡುವಂತೆ ಆಹಾರ ಇಲಾಖೆಯ ಶಿರಸ್ತೇದಾರ್ ಸಣ್ಣಸ್ವಾಮಿ ಅವರಿಗೆ ನಿರ್ದೇಶನ ನೀಡಿ ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸಿದರು.
ತಹಸೀಲ್ದಾರ್ ನಿರ್ದೇಶನದ ಮೇರೆಗೆ ರಿಯಾಜ್ ಪಾಷಾ ಪತ್ತೆಗಾಗಿ ಪೊಲೀಸರು, ಕಾರ್ಮಿಕ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಪಂಚವಳ್ಳಿ ಗ್ರಾಮಕ್ಕೆ ತೆರಳಿದ್ದು, ಆತ ವಾಸವಿರುವ ಮನೆ ಮತ್ತು ಕುಟುಂಬಸ್ಥರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.