

ಅರಕಲಗೂಡು: ಮುಂಬಡ್ತಿ ಪಡೆದು ವರ್ಗಾವಣೆಗೊಂಡಿರುವ ತಹಸೀಲ್ದಾರ್ ಕೆ.ಆರ್.ಶ್ರೀನಿವಾಸ್ ಅವರನ್ನು ಶುಕ್ರವಾರ ಪಟ್ಟಣದ ಶಿಕ್ಷಕರ ಭವನದಲ್ಲಿ ಸಾರ್ವಜನಿಕರು ಸನ್ಮಾನಿಸಿದರು.
ವಿವಿಧ ಸಂಘ, ಸಂಸ್ಥೆಗಳು, ರೈತರು, ದಲಿತ ಸಂಘಟನೆಗಳು, ನೌಕರ ವರ್ಗದವರು ಹಾಗೂ ಸಾರ್ವಜನಿಕರು ವೇದಿಕೆ ಮೇಲೆ ನೂಕುನುಗ್ಗಲಿನಲ್ಲಿ ಧಾವಿಸಿ ತಹಸೀಲ್ದಾರ್ ಶ್ರೀನಿವಾಸ್ ಅವರಿಗೆ ಶಾಲು ಹೊದಿಸಿ ಹಾರ ಹಾಕಿ ಪ್ರೀತಿ, ಅಭಿಮಾನದ ಹೊಳೆ ಹರಿಸಿದರು.
ತಹಸೀಲ್ದಾರ್ ಶ್ರೀನಿವಾಸ್ ಅವರ ಸೇವಾ ಕಾರ್ಯ ಮತ್ತು ಸಾಧನೆಗಳನ್ನು ತಿಳಿಸುವ ಭಿತ್ತಿಪತ್ರಗಳನ್ನು ಹಿಡಿದು ಬಿಎಸ್‌ಪಿ ಕಾರ್ಯಕರ್ತರು ಪಟ್ಟಣದ ಪ್ರವಾಸಿ ಮಂದಿರದಿಂದ ಅನಕೃ ವೃತ್ತ ಮಾರ್ಗವಾಗಿ ಶಿಕ್ಷಕರ ಭವನದವರೆಗೆ ಮೆರವಣಿಗೆಯಲ್ಲಿ ಬಂದು ಸನ್ಮಾನ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎ.ಟಿ. ರಾಮಸ್ವಾಮಿ, ತಮ್ಮ ಸೇವಾ ಅವಧಿಯಲ್ಲಿ ಬಡವರು, ರೈತರು, ದುರ್ಬಲರ ಸಮಸ್ಯೆಗಳಿಗೆ ಸ್ಪಂದಿಸಿ ಶ್ರೀನಿವಾಸ್ ಉತ್ತಮ ಕಾರ್ಯ ನಿರ್ವಹಿಸಿದ್ದಾರೆ. ಖುದ್ದು ಗ್ರಾಮಗಳಿಗೆ ತೆರಳಿ ಅರ್ಹರನ್ನು ಗುರುತಿಸಿ ಪಿಂಚಣಿ ಸೌಲಭ್ಯ ದೊರಕಿಸಿಕೊಟ್ಟಿದ್ದಾರೆ. ಪೌತಿ ಖಾತೆ ಆಂದೋಲನ, ಕೆರೆ ಒತ್ತುವರಿ ತೆರವು, ಸ್ಮಶಾನ ಭೂಮಿ ಗುರುತಿಸುವುದು ಮಾಡಿದ್ದಾರೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಶ್ರೀನಿವಾಸ್, ತಾಲೂಕಿನ ಜನ ತೋರಿದ ಪ್ರೀತಿ, ವಿಶ್ವಾಸವನ್ನು ಮರೆಯಲು ಸಾಧ್ಯವಿಲ್ಲ. ಬಡಜನರ ಕೆಲಸವನ್ನು ಪ್ರಾಮಾಣಿಕವಾಗಿ ನಿರ್ವಹಿಸಿರುವ ಆತ್ಮತೃಪ್ತಿ. ಈ ಅಭಿಮಾನ, ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ದೊಡ್ಡಮಠದ ಮಠಾಧೀಶ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಎಚ್.ಎಸ್. ರಶ್ಮಿ, ಬಿಇಒ ದೇವರಾಜು, ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆ ನಿರ್ದೇಶಕ ಮುತ್ತಿಗೆ ರಾಜೇಗೌಡ, ತಾಲೂಕು ರೈತ ಸಂಘದ ಅಧ್ಯಕ್ಷ ಸೀಬಳ್ಳಿ ಯೋಗಣ್ಣ ಇತರರು ಇದ್ದರು. ಈ ಸಂದರ್ಭದಲ್ಲಿ ಬಗರ್‌ಹುಕುಂ ಫಲಾನುಭವಿಗಳಿಗೆ ಜಮೀನು ಮಂಜೂರಾತಿ ಹಕ್ಕು ಪತ್ರ ವಿತರಿಸಲಾಯಿತು.