ತಹಸೀಲ್ದಾರ್ ಕಚೇರಿಯಲ್ಲಿ ಭ್ರಷ್ಟಾಚಾರ

Corruption in the Tahsildar's office
Corruption in the Tahsildar's office
Published on

ಇಳಕಲ್ಲ(ಗ್ರಾ): ತಹಸೀಲ್ದಾರ್ ಕಚೇರಿಯಲ್ಲಿಯೇ ಭ್ರಷ್ಟಾಚಾರ ನಡೆಯುತ್ತಿದ್ದು, ಹುನಗುಂದ ವಿಧಾನಸಭಾ ಕ್ಷೇತ್ರದಲ್ಲಿ ತುಘಲಕ್ ಆಡಳಿತ ನಡೆದಿದೆ ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಆರೋಪಿಸಿದರು.

ಬಿಜೆಪಿ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಹಸೀಲ್ದಾರ್ ಕಚೇರಿಯ ಅನಾಮಧೇಯ ವ್ಯಕ್ತಿಯಿಂದ ಬಂದ ಪತ್ರವನ್ನು ಪ್ರದರ್ಶಿಸಿ ಲೋಕಾಯುಕ್ತ ಅಧಿಕಾರಿಗಳು ಇಳಕಲ್‌ಗೆ ಬಂದಾಗ ಅವರ ಕಾರ್ಯಕ್ರಮಕ್ಕೆ ಎಂದು ಸಿಬ್ಬಂದಿಯಿಂದ ಮೊದಲಿಗೆ ತಲಾ ಐದು ನೂರು ರೂ. ಪಡೆದು ನಂತರ ಕಾರ್ಯಕ್ರಮ ಮುಗಿದ ಮೇಲೆ ಲೋಕಾಯುಕ್ತರು ಹಣ ಕೇಳಿದ್ದಾರೆ. ಆದ್ದರಿಂದ ತಲಾ 15 ಸಾವಿರ ರೂ. ಕೊಡಿ ಎಂದು ಕೇಳಿ ಸಿಬ್ಬಂದಿಯಿಂದ ಒಟ್ಟು 50 ಸಾವಿರ ರೂ. ಪಡೆದಿದ್ದಾರೆ ಎಂದು ಪತ್ರದಲ್ಲಿ ಬರೆದಿದ್ದಾರೆ. ಜತೆಗೆ ಹಣ ಸಂಗ್ರಹಿಸಿದ ಪತ್ರಗಳ ನಕಲನ್ನು ಸಹ ಲಗತ್ತಿಸಿದ್ದಾರೆ ಎಂದು ವಿವರಿಸಿದರು.

ಭ್ರಷ್ಟಾಚಾರ ಬಗ್ಗು ಬಡಿಯುವ ಲೋಕಾಯುಕ್ತರ ಹೆಸರಲ್ಲಿಯೇ ಈ ರೀತಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ಇದಕ್ಕೆಲ್ಲ ಯಾರು ಹೊಣೆ? ಎಂದು ಪ್ರಶ್ನಿಸಿದ ಅವರು, ಯಾವುದೋ ಒಂದು ನಿಗಮಕ್ಕೆ ಅಧ್ಯಕ್ಷ ಎಂಬ ಕಾರಣಕ್ಕೆ ಪೊಲೀಸರು ಶಾಸಕರ ವಾಹನದ ಮುಂದೆ ಸೈರನ್ ಹಚ್ಚಿ ತಿರುಗಾಡುವುದೆ ಇಲ್ಲಿ ಒಂದು ಸಾಧನೆಯಾಗಿದೆ ಎಂದು ಕುಟುಕಿದರು.

ತಹಸೀಲ್ದಾರ್ ಕಚೇರಿಯಲ್ಲಿ ಲೋಕಾಯುಕ್ತರ ಹೆಸರಲ್ಲಿ ನಡೆದ ಈ ಅವ್ಯವಹಾರದ ಬಗ್ಗೆ ಮುಖ್ಯ ಲೋಕಾಯುಕ್ತರಿಗೆ ಪತ್ರ ಬರೆದು ಇದರ ಬಗ್ಗೆ ಕೂಲಂಕಷ ವಿಚಾರಣೆ ನಡೆಸಬೇಕು. ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತೇನೆ ಎಂದು ಹೇಳಿದರು.

ಈ ಕ್ಷೇತ್ರದ ಗ್ರಾಮವೊಂದರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವಾಗಿದೆ. ನಗರದಲ್ಲಿ ಕುಡಿಯಲು ನೀರಿಲ್ಲ. ವಿದ್ಯುತ್ ವ್ಯತ್ಯಯ ಮೇಲಿಂದ ಮೇಲೆ ಆಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತಿದ್ದೇನೆ ಎಂದು ಯಾವ ಮುಖದಿಂದ ಶಾಸಕರು ಹೇಳುತ್ತಿದ್ದಾರೆ? ಎಂದು ಪ್ರಶ್ನಿಸಿದರು.

ಶ್ಯಾಮಸುಂದರ ಕರವಾ, ಲಕ್ಷ್ಮಣ ಗುರಂ, ಶಿವನಗೌಡ ಅಗಸಿಮುಂದಿನ, ಮಹಾಂತಗೌಡ ಪಾಟೀಲ ತೊಂಡಿಹಾಳ, ಮಹಾಂತಪ್ಪ ಚೆನ್ನಿ, ಚಂದ್ರಶೇಖರ ಏಕಬೋಟೆ, ಸುಗೂರೇಶ ನಾಗಲೋಟಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net