ಯಾದಗಿರಿ: ಸುರಪುರ ತಹಸೀಲ್ದಾರರ ಸಹಿ ಮತ್ತು ಸೀಲ್ ನಕಲಿ ಮಾಡಿ 75.59 ಲಕ್ಷ ರೂ. ಮಹಾಲಕ್ಷ್ಮೀ ಎಂಟರ್ಪ್ರೈಸೆಸ್ ಖಾತೆಗೆ ವರ್ಗಾವಣೆ, ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ತಹಸಿಲ್ ಕಚೇರಿ ಪ್ರಥಮ ದರ್ಜೆಸಹಾಯಕ ರಾಜು ಸಿ.ಎಸ್. ಅವರನ್ನು ಗುರುವಾರ ಸೇವೆಯಿಂದ ಅಮಾನತು ಮಾಡಲಾಗಿದೆ.
ಮೂರು ತಿಂಗಳ ಹಿಂದೆ ತಹಸೀಲ್ದಾರ್ ನಿಂಗಣ್ಣ ಬಿರಾದಾರ್ ಅವರ ನಕಲಿ ಸಹಿ ಮತ್ತು ಮೊಹರು ಮಾಡಿ 75.59 ಲಕ್ಷ ರೂ.ಗಳನ್ನು ಮಹಾಲಕ್ಷ್ಮೀ ಎಂಟರ್ಪ್ರೈಸೆಸ್ ಖಾತೆಗೆ ಜಮೆ ಮಾಡಿರುವುದು ತಡವಾಗಿ ಬೆಳಕಿಗೆ ಬಂದಿತ್ತು. ತಹಸೀಲ್ದಾರರು ಇಲ್ಲದ ಸಮಯದಲ್ಲಿ ನಡೆದ ವಂಚನೆ ಬಗ್ಗೆ ತನಿಖೆ ನಡೆಸುವಂತೆ ಸುರಪುರ ಪೊಲೀಸ್ ಠಾಣೆಯಲ್ಲಿ ತಹಸೀಲ್ದಾರ್ ನಿಂಗಣ್ಣ ದೂರು ದಾಖಲಿಸಿದ್ದಾರೆ.
ಇದರ ಮುಂದುವರಿದ ಭಾಗವಾಗಿ ಎಫ್ಡಿಎ ಸಸ್ಪೆಂಡ್ ಆಗಿದ್ದು, ತಹಸೀಲ್ದಾರ್ ಹಾಗೂ ಶಿರಸ್ತೇದಾರ್ ವಿರುದ್ಧ ಕ್ರಮಕ್ಕಾಗಿ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆಯಲಾಗಿದೆ ಎಂದು ಡಿಸಿ ಡಾ.ಆರ್.ರಾಗಪ್ರಿಯಾ ವಿಜಯವಾಣಿಗೆ ತಿಳಿಸಿದ್ದಾರೆ.