

ಹುಬ್ಬಳ್ಳಿ: ಇಲ್ಲಿನ ಶಾಂತಿನಗರದಲ್ಲಿ ಕರೊನಾ ಸೋಂಕಿತ ವ್ಯಕ್ತಿ ಪತ್ತೆಯಾದ ಬಳಿಕ ಜನರ ಓಡಾಟಕ್ಕೆ ಮೊದಲು ತಡೆ ಬಿದ್ದಿರಲಿಲ್ಲ. ಈಗ ಎಲ್ಲ ರೀತಿಯಿಂದ ತಹಬಂದಿಗೆ ಬರಲು ಆರಂಭಿಸಿದೆ.
ಸೋಂಕಿತನ ಮನೆಯ ಸುತ್ತಲಿನ ನೂರು ಮೀ. ವ್ಯಾಪ್ತಿಯಲ್ಲಿ ಸುಮಾರು 450 ಮನೆಗಳಿದ್ದು, 2250 ಜನ ವಾಸ ಮಾಡುತ್ತಿದ್ದಾರೆ. ಇವರದ್ದೇ ಆಗಿರುವ ಒಂದು ವಾಟ್ಸ್ ಆಪ್ ಗ್ರುಪ್ ರಚಿಸಿದ್ದು, ಪ್ರತಿ ಸಮಸ್ಯೆಗೂ ಪರಿಹಾರ ಪಡೆಯಲಾಗುತ್ತಿದೆ. ಇಲ್ಲಿನ ಪಾಲಿಕೆ ಸದಸ್ಯರು ಹಾಗೂ ಹಿರಿಯರು ಈ ಗ್ರುಪ್ನಲ್ಲಿದ್ದು, ಕರೊನಾ ತಡೆಗೆ ಹಾಗೂ ಜನರು ಹೊರಬಾರದಂತೆ ನೋಡಿಕೊಳ್ಳುವ ಉಸ್ತುವಾರಿ ಹೊತ್ತಿದ್ದಾರೆ. ಈ ಪ್ರದೇಶಕ್ಕೆ ತರಕಾರಿ, ಹಣ್ಣು, ದಿನಸಿ ಮಾರಾಟ ಮಾಡಲು ಮೊದಲು ಕೆಲವರು ಹಿಂದೇಟು ಹಾಕಿದ್ದರು. ಆದರೆ, ಕ್ರಮೇಣ ತಾವಾಗಿ ಮುಂದೆ ಬಂದಿದ್ದು ಒಬ್ಬರು ತರಕಾರಿ, ಮಾಂಸ, ಹಾಲು ಮಾರಾಟ ಮಾಡಿದರೆ, ಇಬ್ಬರು ದಿನಸಿಗಳನ್ನು ಮನೆ ಬಾಗಿಲಿಗೆ ತಲುಪಿಸುತ್ತಿದ್ದಾರೆ. ಇವರಿಗೂ ಸೋಂಕು ಹರಡದಂತೆ ನೋಡಿಕೊಳ್ಳಲಾಗುತ್ತಿದೆ. ಔಷಧ ಸೇರಿ ಇತರೆ ಅಗತ್ಯ ವಸ್ತುಗಳಿಗೆ ಪಾಲಿಕೆಯ ಕಂಟ್ರೋಲ್ ರೂಮ್ೆ ಕರೆ ಮಾಡಿದರೆ ಸಾಕು, ಸಿಬ್ಬಂದಿ ತಲುಪಿಸುತ್ತಿದ್ದಾರೆ.
ಬಂದೋಬಸ್ತ್: ಈ ಪ್ರದೇಶದಲ್ಲಿ ಗರ್ಭಿಣಿ, ನವಜಾತ ಶಿಶುಗಳಿರುವ ಮಾಹಿತಿ ಪಾಲಿಕೆಗೆ ಇಲ್ಲ. ಆದರೆ ವಯಸ್ಸಾದವರಿದ್ದಾರೆ. ಆರೋಗ್ಯ ಇಲಾಖೆಯ ಸಿಬ್ಬಂದಿಯೂ ಕರ್ತವ್ಯ ಪಾಲನೆಯಲ್ಲಿ ತೊಡಗಿದ್ದಾರೆ. ಪೊಲೀಸ್ ಸಿಬ್ಬಂದಿ ಸದಾ ಕಣ್ಗಾವಲಿಟ್ಟಿದೆ. ಬಿಗಿ ಬಂದೋಬಸ್ತ್ ಕೈಗೊಂಡಿದ್ದರಿಂದ ಇಲ್ಲಿನ ಜನರು ಹೊರಗಡೆ, ಹೊರಗಡೆಯ ಜನರು ಈ ಪ್ರದೇಶಕ್ಕೆ ಬರುತ್ತಿಲ್ಲ. ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗಿದೆ ಎಂದು ಘಟನಾ ಕಮಾಂಡರ್ ಆನಂದ ಕಾಂಬಳೆ ತಿಳಿಸಿದ್ದಾರೆ.