

ಚಿಕ್ಕಬಳ್ಳಾಪುರ: ಲಾಕ್‌ಡೌನ್‌ನಿಂದಾಗಿ ಅತ್ತ ಕೆಲಸವಿಲ್ಲದೆ ಇತ್ತ ಸಂಪಾದನೆಯೂ ಇಲ್ಲದೆ ಅತಂತ್ರರಾಗಿರುವ ವಲಸೆ ಕಾರ್ಮಿಕರು ಈಗ ತಮ್ಮೂರುಗಳಿಗೆ ತೆರಳಲು ಪರದಾಡುವಂತಾಗಿದೆ.
ಸರ್ಕಾರದ ವಿಳಂಬ ಸೌಕರ್ಯಗಳ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರು ಅನಿವಾರ್ಯವಾಗಿ ಕಾಲ್ನಡಿಗೆ, ಸೈಕಲ್‌ಗಳಲ್ಲಿ ತಮ್ಮೂರುಗಳತ್ತ ಮುಖಮಾಡುತ್ತಿದ್ದಾರೆ. ಚಿಕ್ಕಬಳ್ಳಾಪುರದ ನಡುವೆ ರಾಷ್ಟ್ರೀಯ ಹೆದ್ದಾರಿ 7, 238 ಹಾದು ಹೋಗಿದ್ದು ಕಾಲ್ನಡಿಗೆಯಲ್ಲಿ ಕಾರ್ಮಿಕರು ಗುಂಪು ಗುಂಪಾಗಿ ಸಾಗುವ ದೃಶ್ಯಗಳು ನಿತ್ಯ ಕಂಡುಬರುತ್ತಿವೆ.
ಜಿಲ್ಲೆಯಲ್ಲಿ ಪ್ರಸ್ತುತ ವಲಸೆ ಕಾರ್ಮಿಕರಿಗೆ ಆರೋಗ್ಯ ತಪಾಸಣೆ, ಸ್ವಗ್ರಾಮಗಳಿಗೆ ತೆರಳಲು ಪಾಸ್ ವಿತರಣೆ, ಸಾರಿಗೆ ಸಂಸ್ಥೆಯ ಬಸ್ ಸೌಕರ್ಯ ಸೇರಿ ಹಲವು ಪ್ರಕ್ರಿಯೆಗಳಲ್ಲಿ ಜಿಲ್ಲಾಡಳಿತ ನಿರತವಾಗಿದೆ. ಆದರೆ, ಇದು ಆಮೆಗತಿಯಲ್ಲಿ ಸಾಗುತ್ತಿದ್ದು, ಊಟ ವಸತಿ, ಕೆಲಸ, ಸಂಪಾದನೆಯಿಲ್ಲದೆ ಪರಿತಪಿಸುತ್ತಿರುವ ಕಾರ್ಮಿಕರು ವಿಧಿಯಿಲ್ಲದೇ ತಮ್ಮ ಯಾತ್ರೆ ಆರಂಭಿಸಿದ್ದಾರೆ.
ಗೌರಿಬಿದನೂರು ತಾಲೂಕು ಕುಡುಮಲಕುಂಟೆ ಮತ್ತು ಚಿಕ್ಕಬಳ್ಳಾಪುರ ಕೈಗಾರಿಕಾ ಪ್ರದೇಶದಲ್ಲಿನ ಕೈಗಾರಿಕೆಗಳು, ವಿವಿಧ ಖಾಸಗಿ ಕಚೇರಿ ಅನೇಕ ಸಂಸ್ಥೆಗಳಲ್ಲಿ ಒರಿಸ್ಸಾ, ಬಿಹಾರ, ಮಹಾರಾಷ್ಟ್ರ, ಆಂಧ್ರ, ತಮಿಳುನಾಡು, ರಾಜಸ್ಥಾನ, ಉತ್ತರ ಪ್ರದೇಶ, ಸಿಕ್ಕಿಂ, ಪಂಜಾಬ್ ಸೇರಿ ವಿವಿಧೆಡೆ ಜನರು ಕೆಲಸ ಮಾಡುತ್ತಿದ್ದಾರೆ. ಮತ್ತೆ ಹಲವರು ರಸ್ತೆ ನಿರ್ಮಾಣ, ಇಟ್ಟಿಗೆ ಗೂಡು ಕೆಲಸ ಜತೆಗೆ ಹಲವು ವೃತ್ತಿಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಆದರೆ ಲಾಕ್‌ಡೌನ್‌ನಿಂದಾಗಿ ಕೈಗಾರಿಕೆಗಳು ಬಂದ್ ಆಗಿವೆ, ಕಾಮಗಾರಿಗಳಿಗೂ ಗ್ರಹಣ ಹಿಡಿದಿದೆ, ಈ ಹಿನ್ನೆಲೆಯಲ್ಲಿ ಕೂಲಿಯನ್ನೇ ನೆಚ್ಚಿಕೊಂಡಿದ್ದವರು ಇದೀಗ ಅತಂತ್ರರಾಗಿದ್ದಾರೆ, ಇನ್ನೂ ಕನಿಷ್ಠ ನಾಲ್ಕೈದು ತಿಂಗಳು ಸಂಪಾದನೆ ಇಲ್ಲ ಎಂಬುದನ್ನರಿತು ಕಾರ್ಮಿಕರು ತಮ್ಮೂರಿಗೆ ತೆರಳುತ್ತಿದ್ದಾರೆ.
ವಿಳಂಬವೇ ಸಮಸ್ಯೆಗೆ ಕಾರಣ: ಕರೊನಾ ಸೃಷ್ಟಿಸಿರುವ ನಿರುದ್ಯೋಗ ಸಮಸ್ಯೆಯಿಂದ ಸಂಪಾದನೆಗೆ ಕುತ್ತು ಬಂದಿದೆ, ಕೆಲಸದಲ್ಲೂ ತೊಂದರೆ ಅನುಭವಿಸುವ ಕಾರ್ಮಿಕರು ಈಗ ಊರಿಗೆ ಹೋಗಲು ಪರದಾಡುವಂತಾಗಿದೆ. ಈಗಾಗಲೇ ಜಿಲ್ಲಾಡಳಿತ ಸೇವಾ ಸಿಂಧು ಆನ್‌ಲೈನ್‌ನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದ ಕಾರ್ಮಿಕರ ಪೈಕಿ 300 ಕ್ಕೂ ಹೆಚ್ಚು ಮಂದಿಯನ್ನು ಊರಿಗೆ ಕಳುಹಿಸಿದೆ. ದೂರ ಪ್ರಯಾಣಿಸುವವರು ಬೆಂಗಳೂರು, ಗೌರಿಬಿದನೂರು ರೈಲ್ವೆ ನಿಲ್ದಾಣದಿಂದ ರೈಲುಗಳಲ್ಲಿ, ದಕ್ಷಿಣ ಭಾರತದ ರಾಜ್ಯಗಳ ಕಾರ್ಮಿಕರು ಬಸ್‌ನಲ್ಲಿ ಹೋಗಿದ್ದಾರೆ. ಆದರೆ, ಇನ್ನು 2 ಸಾವಿರಕ್ಕೂ ಹೆಚ್ಚು ಮಂದಿ ಇಲ್ಲಿಯೇ ಉಳಿದುಕೊಂಡಿದ್ದು ಪ್ರಯಾಣಕ್ಕೆ ಸೂಕ್ತ ವ್ಯವಸ್ಥೆ ಒದಗಿಸಲಾಗುತ್ತಿದೆ. ಆದರೆ, ಈ ಪ್ರಕ್ರಿಯಲ್ಲಿನ ವಿಳಂಬವೇ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ.
ಇಲ್ಲಿ ನಮಗೆ ಕೆಲಸ ಇಲ್ಲ, ನಮ್ಮ ಹತ್ತಿರ ಹಣಾನೂ ಇಲ್ಲ. ಅಧಿಕಾರಿಗಳು ಮೂಲ ಸೌಕರ್ಯ ಒದಗಿಸದೇ ಹಲವು ಪ್ರಕ್ರಿಯೆಗಳ ನೆಪದಲ್ಲಿ ದಿನ ದೂಡುತ್ತಿದ್ದಾರೆ. ಎಷ್ಟು ದಿನ ಸುಮ್ಮನೆ ಇರುವುದಕ್ಕಾಗುತ್ತದೆ?. ಇದಕ್ಕೆ ನಾವೇ ಹೇಗೋ ನಮ್ಮ ಊರಿಗೆ ಹೋಗುತ್ತಿದ್ದೇವೆ. ಚಾಂದ್, ವಲಸಿ ಕಾರ್ಮಿಕ
ಬಂದವರು ವಾಪಸ್ : ಬೆಂಗಳೂರಿನಿಂದ ಚಿಕ್ಕಬಳ್ಳಾಪುರದ ಮಾರ್ಗವಾಗಿ ಬರೋಬ್ಬರಿ 560 ಕಿ.ಮೀ ದೂರದ ಹೈದರಾಬಾದ್‌ಗೆ ತೆರಳುತ್ತಿದ್ದ ಸುಮಾರು 30ಕ್ಕೂ ಹೆಚ್ಚು ಮಂದಿ ಕಾರ್ಮಿಕರನ್ನು ಸ್ಥಳೀಯ ಪೊಲೀಸರು ತಡೆದು ವಾಪಸ್ ಕಳುಹಿಸಿದ್ದಾರೆ. ಬೆಂಗಳೂರಿನ ಅಪಾರ್ಟ್‌ಮೆಂಟ್ ನಿರ್ಮಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಿಹಾರ ಮತ್ತು ಉತ್ತರ ಪ್ರದೇಶ ಮೂಲದ ಕಾರ್ಮಿಕರು ನಿರಂತರವಾಗಿ ಎರಡು ದಿನ ನಡೆದುಕೊಂಡು ಚಿಕ್ಕಬಳ್ಳಾಪುರಕ್ಕೆ ಆಗಮಿಸಿದ್ದರು. ರಾಜಧಾನಿಯಲ್ಲಿ ಅಧಿಕಾರಿಗಳು ಸ್ಪಂದಿಸದಿರುವುದರ ಬಗ್ಗೆ ಅಳಲು ತೋಡಿಕೊಂಡು, ಕಾಲ್ನಡಿಗೆಯಲ್ಲಿ ಹೊರಡಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು. ಆರೋಗ್ಯ ತಪಾಸಣೆ ಬಳಿಕ ರೈಲಿನ ವ್ಯವಸ್ಥೆ ಒದಗಿಸುವ ಭರವಸೆ ನೀಡಿ ಅಧಿಕಾರಿಗಳು ಸಮಾಧಾನಪಡಿಸಿದ್ದಾರೆ. ಗೌರಿಬಿದನೂರು ಕುಡಮಲಕುಂಟೆ ಕೈಗಾರಿಕಾ ಪ್ರದೇಶದಿಂದ ಅನೇಕರು ಬಟ್ಟೆ, ಸಾಮಗ್ರಿಗಳೊಂದಿಗೆ ಸೈಕಲ್‌ನಲ್ಲಿ ಪ್ರಯಾಣ ಆರಂಭಿಸಿದ್ದಾರೆ.
ವಲಸಿಗ ಕಾರ್ಮಿಕರಿಗೆ ನಿಯಮಾನುಸಾರ ವಾಹನ ವ್ಯವಸ್ಥೆ ಒದಗಿಸಿ ಊರಿಗೆ ಕಳುಹಿಸಲಾಗುತ್ತಿದೆ. ಈಗಾಗಲೇ ಜಿಲ್ಲೆಯಿಂದ ಅನೇಕರು ಹೋಗಿದ್ದಾರೆ. ವರಲಕ್ಷ್ಮೀ, ಜಿಲ್ಲಾ ಕಾರ್ಮಿಕ ಅಧಿಕಾರಿ