ತವರು ಜಿಲ್ಲೆಗೆ ಬರುವ ಕಾರ್ಯಕ್ರಮ ರದ್ದು:ಕಾರ್ಯಕರ್ತರಿಗೆ ನಿರಾಸೆ

h.d.revanna
ಎಚ್.ಡಿ.ರೇವಣ್ಣ
Published on

ಹಾಸನ:ಅಪಹರಣ ಪ್ರಕರಣ ಸಂಬಂಧ ಜೈಲು ಸೇರಿದ್ದ ಎಚ್.ಡಿ. ರೇವಣ್ಣ ಅವರಿಗೆ ಜಾಮೀನು ಸಿಕ್ಕ ಬಳಿಕ ಬಿಡುಗಡೆಯಾಗಿದ್ದಾರೆ. ಬಂಧಮುಕ್ತರಾದ ಜೆಡಿಎಸ್ ನಾಯಕ ಎಚ್.ಡಿ. ರೇವಣ್ಣ 11 ದಿನಗಳ ಬಳಿಕ ಬುಧವಾರ ಬೆಳಗ್ಗೆ 9.30ಕ್ಕೆ ಹಾಸನ ಜಿಲ್ಲೆಯ ಗಡಿಭಾಗವಾದ ಕಿರಿಸಾವೆಗೆ ಬೆಂಗಳೂರಿನಿಂದ ಆಗಮಿಸಲಿದ್ದಾರೆ. ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಅವರನ್ನು ಅಭೂತಪೂರ್ವವಾಗಿ ಸ್ವಾಗತಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಕಾರಣಾಂತರಗಳಿಂದ ಅವರು ಬುಧವಾರ ಜಿಲ್ಲೆಗೆ ಆಗಮಿಸುವ ಕಾರ್ಯಕ್ರಮ ರದ್ದಾಗಿದೆ.
ಬುಧವಾರ ಬೆಂಗಳೂರಿನಲ್ಲಿಯೇ ಉಳಿದ ರೇವಣ್ಣ ಅವರು ಪ್ರಕರಣ ಸಂಬಂಧ ಕಾನೂನು ತಜ್ಞರ ಜತೆಗೆ ಸಮಾಲೋಚನೆ ನಡೆಸುವ ಉದ್ದೇಶದಿಂದ ರಾಜಧಾನಿಯಲ್ಲಿಯೇ ಬೀಡುಬಿಟ್ಟಿದ್ದಾರೆ ಎನ್ನಲಾಗಿದೆ. ಜತೆಗೆ ಮಂಗಳವಾರ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದು, ಪೂಜೆ ಸಲ್ಲಿಸಿದರು.

ಹಾರ-ತುರಾಯಿ ಬೇಡ ಎಂದ ರೇವಣ್ಣ
ಎಚ್.ಡಿ.ರೇವಣ್ಣ ಜಿಲ್ಲೆಗೆ ಬಂದಾಗ ಹಾರ, ತುರಾಯಿ ಹಾಕಬೇಡಿ ಹಾಗೂ ಪಟಾಕಿ ಸಿಡಿಸಬೇಡಿ ಎಂದು ಜೆಡಿಎಸ್ ಶಾಸಕರು, ಮುಖಂಡರು ಹಾಗೂ ಕಾರ್ಯಕರ್ತರಿಗೆ ರೇವಣ್ಣ ಮನವಿ ಮಾಡಿದ್ದಾರೆ.
ಈ ವಿಷಯವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ರೇವಣ್ಣ ಅವರು, ‘ಹಾಸನ ಜಿಲ್ಲೆಯ ನನ್ನೆಲ್ಲಾ ಅಭಿಮಾನಿಗಳೆ, ಪಕ್ಷದ ಶಾಸಕರೇ, ಎಲ್ಲಾ ಚುನಾಯಿತ ಪ್ರತಿನಿಧಿಗಳೇ. ನಿಮ್ಮೆಲ್ಲರ ಪ್ರೀತಿ, ಹಾರೈಕೆಯಿಂದ ನಾನು ಜಾಮೀನು ಪಡೆದು ಬಿಡುಗಡೆ ಆಗಿದ್ದೇನೆ. ನಾನು ಘನ ನ್ಯಾಯಾಲಯದ ತೀರ್ಪು, ಆದೇಶಕ್ಕೆ ಗೌರವ ಕೊಡುತ್ತೇನೆ. ಕಡೆವರೆಗೂ ಅದನ್ನು ಪಾಲಿಸುತ್ತೇನೆ. ಇದಕ್ಕೆಲ್ಲಾ ನಿಮ್ಮಗಳ ಪ್ರೀತಿ, ಪ್ರಾರ್ಥನೆಯೇ ಕಾರಣ, ಜತೆಗೆ ತಂದೆ-ತಾಯಿ, ದೇವರು ಕಾರಣ. ನಿಮ್ಮ ಈ ಋಣವನ್ನು ನಾನೆಂದೂ ಮರೆಯಲಾರೆ. ಕೆಲ ದಿನಗಳ ನಂತರ ನಾನು ನನ್ನ ತವರು ಜಿಲ್ಲೆಗೆ ಆಗಮಿಸುತ್ತಿದ್ದೇನೆ. ಯಾರೂ ಕೂಡ ಹಾರ-ತುರಾಯಿ ಹಾಕುವುದಾಗಲೀ, ಪಟಾಕಿ ಸಿಡಿಸುವುದಾಗಲಿ ಮಾಡಬಾರದು ಎಂದು ಈ ಮೂಲಕ ಮನವಿ ಮಾಡುತ್ತೇವೆ.‘ ಎಂದು ಹೇಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net