

ಚಿಕ್ಕಬಳ್ಳಾಪುರ: ರಷ್ಯಾ ದಾಳಿಯಿಂದ ಯೂಕ್ರೇನ್‌ನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಅಲ್ಲಿ ಸಿಲುಕಿಕೊಂಡಿರುವ ಜಿಲ್ಲೆಯ 6 ವಿದ್ಯಾರ್ಥಿಗಳು ತವರಿಗೆ ವಾಪಸ್ ಬರಲು ಎದುರು ನೋಡುತ್ತಿದ್ದಾರೆ.
ವೈದ್ಯಕೀಯ ಶಿಕ್ಷಣ ಕೋರ್ಸ್‌ಗೆ ಜಿಲ್ಲೆಯ ಚಿಂತಾಮಣಿ ನಗರದ ತನ್ಮಯ್ ಗೌತಮ್ ಸಾಯಿಕೃಷ್ಣ, ನಯನ್ ರೆಡ್ಡಿ ಹಾಗೂ ಪ್ರಶಾಂತ್ ನಾಯ್ಡು, ಬಾಗೇಪಲ್ಲಿ ತಾಲೂಕಿನ ಚೇಳೂರಿನ ಐಮನ್ ಬುಶ್ರಾ, ಗುಡಿಬಂಡೆ ತಾಲೂಕಿನ ವರ‌್ಲಕೊಂಡದ ನವನೀತ್, ಚಿಕ್ಕಬಳ್ಳಾಪುರ ನಗರದ ತೇಜ್ ಕುಮಾರ್ ತೆರಳಿದ್ದರು. ಇವರನ್ನು ಜಿಲ್ಲೆಗೆ ಕರೆ ತರಲು ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆಯು ಸರ್ಕಾರದ ಜತೆಗೆ ಕಸರತ್ತು ನಡೆಸುತ್ತಿದ್ದು, ಮಕ್ಕಳ ಪಾಲಕರ ಜತೆ ನಿರಂತರ ಸಂಪರ್ಕದಲ್ಲಿದೆ.
ಉಕ್ರೇನ್‌ನಲ್ಲಿನ ಸ್ಥಿತಿ-ಗತಿಗಳ ಬಗ್ಗೆ ವಿದ್ಯಾರ್ಥಿಗಳು ಹಂಚಿಕೊಳ್ಳುತ್ತಿರುವ ಮಾಹಿತಿ, ಅಗತ್ಯ ನೆರವು ಮತ್ತು ಆತ್ಮವಿಶ್ವಾಸ ತುಂಬುವ ಕೆಲಸದಲ್ಲಿ ನಿರತವಾಗಿದೆ.ಪ್ರಸ್ತುತ ವಿದ್ಯಾರ್ಥಿಗಳು ಕ್ಷೇಮವಾಗಿದ್ದು, ಮುಂದೆ ಏನಾಗುತ್ತದೆಯೋ ಎಂಬ ಆತಂಕ ಕಾಡುತ್ತಿದೆ. ಭಾರತ ಸರ್ಕಾರದಿಂದ ಸ್ವದೇಶಕ್ಕೆ ಕರೆದುಕೊಂಡು ಬರುವ ವ್ಯವಸ್ಥೆಯಾಗಬೇಕು. ಆದರೆ, ವಿಮಾನ ಹಾರಾಟ ನಿಷೇಧ, ಯುದ್ಧ ಭೀತಿಯಲ್ಲಿ ಅನಿಶ್ಚಿತತೆ ಮತ್ತು ಗೊಂದಲದಿಂದ ಓಡಾಡಲು ಅವಕಾಶ ಸಿಗುತ್ತಿಲ್ಲ. ಇದರಿಂದ ಸಂಬಂಧಪಟ್ಟ ಅಧಿಕಾರಿಗಳು ನೆರವಿಗೆ ಎದುರು ನೋಡಲಾಗುತ್ತಿದೆ.ಮತ್ತೊಂದೆಡೆ ಮಕ್ಕಳ ಎದುರು ಯಾವುದೇ ಭಯ ತೋರಿಸಿಕೊಳ್ಳದೆ ಪಾಲಕರು ಧೈರ್ಯದಿಂದ ಮಾತನಾಡುತ್ತಿದ್ದಾರೆ. ಆದರೆ, ಬಳಿಕ ಮಕ್ಕಳ ರಕ್ಷಣೆ, ಆತಂಕದ ಪರಿಸ್ಥಿತಿ ಬಗ್ಗೆ ಅಳಲು ತೋಡಿಕೊಳ್ಳುತ್ತಿದ್ದಾರೆ.
ವಿಡಿಯೋ ಕಾಲ್‌ನಲ್ಲಿ ಧೈರ್ಯ: ವಿದ್ಯಾರ್ಥಿಗಳು ಪಾಲಕರಿಗೆ ಆಗಿಂದಾಗ್ಗೆ ವಿಡಿಯೋ ಕಾಲ್ ಮಾಡುತ್ತಿದ್ದಾರೆ. ಇದೇ ವೇಳೆ ಯುದ್ಧದಿಂದ ಸುರಕ್ಷತೆಯ ಸ್ಥಳದಲ್ಲಿದ್ದು, ಪ್ರಸ್ತುತ ಆತಂಕದ ಪರಿಸ್ಥಿತಿ ನಿರ್ಮಾಣವಾಗಿಲ್ಲ. ಭಾರತೀಯ ರಾಯಭಾರಿ ಕಚೇರಿಯೊಂದಿಗೆ ಸಂಪರ್ಕದಲ್ಲಿದ್ದು, ಅಗತ್ಯ ನೆರವಿನ ನಿರೀಕ್ಷೆಯಲ್ಲಿದ್ದೇವೆ. ಆದಷ್ಟು ಬೇಗ ಬರುತ್ತೇವೆ ಎಂದು ತಿಳಿಸುವ ಮೂಲಕ ಭಯದಲ್ಲಿರುವ ಪಾಲಕರಿಗೆ ಧೈರ್ಯ ತುಂಬುತ್ತಿದ್ದಾರೆ.
ನಿರಂತರವಾಗಿ ಕಾಡುತ್ತಿರುವ ಚಿಂತೆ: ಈಗಾಗಲೇ ಉಕ್ರೇನ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಈ ಭಾಗದ ಬಹುತೇಕ ಜನ ಎಟಿಎಂ, ದಿನಸಿ ಅಂಗಡಿಗಳ ಎದುರು ದೊಡ್ಡ ಸಾಲಿನಲ್ಲಿ ನಿಂತಿರುವ ದೃಶ್ಯ ಕಂಡು ಬರುತ್ತಿದೆ. ಮತ್ತೊಂದೆಡೆ ದೂರದಲ್ಲಿ ದೊಡ್ಡ ಪ್ರಮಾಣದಲ್ಲಿ ಶಬ್ದ ಕೇಳಿ ಬರುತ್ತಿದೆ. ಇದರ ನಡುವೆ ವಿದ್ಯಾರ್ಥಿ ನಿಲಯದಲ್ಲಿ ಯಾರಿಗೂ ಹೊರಗೆ ಹೋಗದಂತೆ ಸೂಚಿಸಲಾಗಿದೆ ಎಂಬುದಾಗಿ ವರ‌್ಲಕೊಂಡದ ನವನೀತ್ ತಿಳಿಸಿರುವ ಬಗ್ಗೆ ಪಾಲಕರು ಮಾಹಿತಿ ನೀಡಿದ್ದಾರೆ.
ಜಿಲ್ಲೆಯ 6 ವಿದ್ಯಾರ್ಥಿಗಳು ಸುರಕ್ಷಿತವಾಗಿರುವುದು ದೃಢಪಟ್ಟಿದೆ. ಅಗತ್ಯ ನೆರವು ಒದಗಿಸುವ ನಿಟ್ಟಿನಲ್ಲಿ ನಿರಂತರ ಸಂಪರ್ಕದಲ್ಲಿದ್ದು ಕಾಲ ಕಾಲಕ್ಕೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಜಿ.ಕೆ.ಮಿಥುನ್ ಕುಮಾರ್, ಎಸ್ಪಿ, ಚಿಕ್ಕಬಳ್ಳಾಪುರ
ಚಿಂತಾಮಣಿಯ ಮೆಡಿಕಲ್ ವಿದ್ಯಾರ್ಥಿ ಸುರಕ್ಷಿತ: ಚಿಂತಾಮಣಿ: ನಗರದ ವೆಲ್‌ಕಂ ಟೇಲರ್ ಅಂಗಡಿ ಮಾಲೀಕ ವೆಂಕಟರೆಡ್ಡಿ ಎಂಬುವರ ಮಗ ಗೌತಮ್ ಸಾಯಿ ಕೃಷ್ಣಾರೆಡ್ಡಿ ಸದ್ಯಕ್ಕೆ ಸುರಕ್ಷಿತವಾಗಿದ್ದಾರೆ ಎಂದು ಪಾಲಕರು ವಿಜಯವಾಣಿಗೆ ತಿಳಿಸಿದ್ದಾರೆ. ಯೂಕ್ರೇನಿನ ಮಾಯಿಕೋವಿಸ್ಕಿ ಅವಿ ನಗರದ ಜೋಪ್ರಿಯಾ ಮೆಡಿಕಲ್ ಕಾಲೇಜಿನಲ್ಲಿ ಮೂರು ವರ್ಷಗಳಿಂದ ವ್ಯಾಸಂಗ ಮಾಡುತ್ತಿರುವ ಗೌತಮ್ ಅಲ್ಲಿನ ಪರಿಸ್ಥಿತಿ ನೋಡಿಕೊಂಡು ಭಾರತಕ್ಕೆ ಹಿಂತಿರುಗುವುದಾಗಿ ಹೇಳಿದ್ದಾರೆ.