ತಳ್ಳುಗಾಡಿ ಅನುದಾನ ಅರ್ಹರಿಗೆ ತಲುಪಲಿ

15
Published on

ಬೈಲಹೊಂಗಲ: ಬೀದಿಬದಿ ವ್ಯಾಪಾರಸ್ಥರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರದಿಂದ ತಳ್ಳುವ ಗಾಡಿಗಳ ಖರೀದಿಗೆ ಸಹಾಯಧನ ನೀಡಲಾಗುತ್ತದೆ. ಆದರೆ ವ್ಯಾಪಾರಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಿ ಬೀದಿಬದಿ ವ್ಯಾಪಾರಸ್ಥರ ಸಂಘದಿಂದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾಧ್ಯಕ್ಷ ಸುನೀಲ ಹಲಗಿ ಮಾತನಾಡಿ, ತಳ್ಳುವ ಗಾಡಿಗಳ ಖರೀದಿಗೆ ಸರ್ಕಾರದಿಂದ 15 ಸಾವಿರ ರೂ. ಸಹಾಯಧನ ನೀಡಲಾಗುತ್ತಿದೆ. ಆದರೆ ಯೋಜನೆ ಸಾರ್ಥಕತೆಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಮಾಹಿತಿ ನೀಡುವಲ್ಲಿ ಅಧಿಕಾರಿಗಳು ಹಿಂದೇಟು ಹಾಕಿದ ಪರಿಣಾಮ ಯೋಜನೆಯ ಲಾಭ ಸಿಗುತ್ತಿಲ್ಲ. ಹಾಗಾಗಿ ವ್ಯಾಪಾರಸ್ಥರಿಗೆ ಯೋಜನೆಯ ಲಾಭ ಸಿಗುವಂತೆ ಮಾಡಬೇಕು ಎಂದು ಆಗ್ರಹಿಸಿದರು.

ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕಿ ಶೀಲಾ ಮುರಗೋಡ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ಈ ಕುರಿತು ಈಗಾಗಲೇ ಮೇಲಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಸಹಾಯಧನ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮನವರಿಕೆ ಮಾಡಿದರು. ನಂತರ ಪ್ರತಿಭಟನೆ ಹಿಂಪಡೆದರು.

ತಾಲೂಕು ಅಧ್ಯಕ್ಷ ಶಿವಾನಂದ ಭಾಗನ್ನವರ, ಶಿವಯೋಗಿ ಹುಲೆನ್ನವರ, ಮಲ್ಲಿಕಾರ್ಜುನ ಹಲಗಿ, ಶಂಕರ ಕೊರಿಕೋಪ್ಪ, ಶ್ರೀನಿವಾಸ ಭರಮನ್ನವರ, ರಮೇಶ ಹರಿಜನ, ಗೀತಾ ಹುಲಿಮಠ, ಕಸ್ತೂರಿ ಅಸುಂಡಿ, ರತ್ನವ್ವ ನಡುವಿನಹಳ್ಳಿ, ಸುರೇಖಾ ಹೋಟಕರ, ಬಿಬಿಜಾನ್ ಉಡಿಕೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net