ತಳವಾರ- ಪರಿವಾರ ಹೋರಾಟ ಹತ್ತಿಕ್ಕಲು ಯತ್ನ: ಪೊಲೀಸರ ವಿರುದ್ಧ ಆಕ್ರೋಶ

IMG-20201120-WA0053
Published on

ವಿಜಯಪುರ: ಕೇಂದ್ರ ಸರ್ಕಾರದ ರಾಜ್ಯ ಪತ್ರ ತಿರುಚಿ ಪದೇ ಪದೇ ಗೊಂದಲ ಸೃಷ್ಟಿಸಿ ಎಸ್‌ಟಿ ಪ್ರಮಾಣ ಪತ್ರ ನೀಡಲು ವಿಳಂಬ ನೀತಿ ಅನುಸರಿಸುತ್ತಿರುವುದಲ್ಲದೇ ಶಾಂತಿಯುತ ಹೋರಾಟವನ್ನೂ ಹತ್ತಿಕ್ಕುವ ಸರ್ಕಾರದ ಕ್ರಮ ಖಂಡಿಸಿ ತಳವಾರ ಮತ್ತು ಪರಿವಾರ ಯುವ ಸೈನ್ಯದ ಪದಾಧಿಕಾರಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.

ಇಲ್ಲಿನ ಜಿಲ್ಲಾಡಳಿತ ಕಚೇರಿ ಎದುರು ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಪದಧಿಕಾರಿಗಳು ಕಲಬುರಗಿಯಲ್ಲಿ ಹೋರಾಟಗಾರರ ಮೇಲೆ ದಬ್ಬಾಳಿಕೆ ಮೆರೆಯುತ್ತಿರುವ ಪೊಲೀಸರ ಮೇಲೆ ಕ್ರಮ ಕೈಗೊಳ್ಳಲು ಒತ್ತಾಯಿಸಿದರು. ಬಳಿಕ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

ಕಳೆದ ಆರು ತಿಂಗಳಿಂದ ಜಾತಿ ಪ್ರಮಾಣ ಪತ್ರಕ್ಕಾಗಿ ಹೋರಾಟ ಮಾಡುತ್ತಿದ್ದರೂ ಸರ್ಕಾರ ಕ್ಯಾರೆ ಎನ್ನುತ್ತಿಲ್ಲ. ಇದೀಗ ಹೋರಾಟ ಎದುರಿಸಲಾಗದೆ ಪೊಲೀಸ್ ಇಲಾಖೆಯನ್ನು ಬಳಸಿಕೊಂಡು ಹೋರಾಟ ಹತ್ತಿಕ್ಕುತ್ತಿರುವುದು ಸಂವಿಧಾನ ವಿರೋಧಿ ಕೃತ್ಯ ಎಂದು ಆಕ್ರೋಶ ಹೊರಹಾಕಿದರು.

ನಾಚಿಕೆಗೇಡಿನ ಸಂಗತಿ:

ತಳವಾರ ಮತ್ತು ಪರಿವಾರ ಅತ್ಯಂತ ಶೋಷಿತ ಸಮುದಾಯ. ನಾಯಕ ಮತ್ತು ನಾಯಕಡ ಸಮುದಾಯದ ಒಳಪಂಗಡವಾಗಿರುವ ರಾಜ್ಯದ 12 ಲಕ್ಷ ಸಮುದಾಯದವರನ್ನು ಎಸ್‌ಟಿಗೆ ಸೇರ್ಪಡೆಗೊಳಿಸಿ ಕೇದ್ರ ಸರ್ಕಾರ ರಾಜ್ಯಪತ್ರ ಹೊರಡಿಸಿದೆ. ಆ ಪ್ರಕಾರ ಎಸ್‌ಟಿ ಪ್ರಮಾಣ ಪತ್ರ ನೀಡಬೇಕಾಗಿರುವ ಸಮಾಜ ಕಲ್ಯಾಣ ಇಲಾಖೆ ಅನವಶ್ಯಕ ಗೊಂದಲ ಸೃಷ್ಟಿಸುತ್ತಿದೆ. ದಿನಕ್ಕೊಂದು ಸುತ್ತೋಲೆ, ಆದೇಶ ಮತ್ತು ಅಧಿಸೂಚನೆ ಹೊರಡಿಸುತ್ತಲೇ ಇದ್ದು ಕೆಳವರ್ಗದ ಅಧಿಕಾರಿಗಳನ್ನು ಗೊಂದಲಕ್ಕೀಡು ಮಾಡಿದೆ. ರಾಜ್ಯದಲ್ಲಿ ತಳವಾರ ಮತ್ತು ಪರಿವಾರ ಒಂದೇ ಸಮುದಾಯ. ಇದರಲ್ಲಿ ಯಾವುದೇ ಅನ್ಯ ಜಾತಿಯವರು ಇಲ್ಲ. ಈ ಬಗ್ಗೆ ಪುರಾವೆ ಸಹಿತ ಸಾಕಷ್ಟು ಮನವರಿಕೆ ಮಾಡಿದರೂ ಅಧಿಕಾರಿಗಳಿಗೆ ಆಲಿಸುವ ವ್ಯವಧಾನ ಇಲ್ಲವಾಗಿದೆ. ಕೆಲ ಮೀಸಲಾತಿ ವಿರೋಧಿ ಬಲಿತ ದಲಿತ ರಾಜಕೀಯ ನಾಯಕರ ಕುತಂತ್ರದಿಂದ ಪ್ರಮಾಣ ಪತ್ರ ತಡೆ ಹಿಡಿಯಲಾಗುತ್ತಿದೆ. ಇದನ್ನು ಖಂಡಿಸಿ ರಾಜ್ಯಾದ್ಯಂತ ತಳವಾರ ಮತ್ತು ಪರಿವಾರ ಸಮುದಾಯದವರು ಹೋರಾಟ ನಡೆಸುತ್ತಿದ್ದಾರೆ. ಇದನ್ನು ಸಹಿಸಿಕೊಳ್ಳಲಾಗದೇ ಕಲಬುರಗಿ ಉಸ್ತುವಾರಿ ಮಂತ್ರಿಗಳು ಪೊಲೀಸ್ ಇಲಾಖೆಯನ್ನು ಬಳಸಿಕೊಂಡು ಹೋರಾಟ ಹತ್ತಿಕ್ಕಲು ಯತ್ನಿಸುತ್ತಿರುವುದು ನಾಚಿಕೆಗೇಡು ಎಂದರು.

ಹೋರಾಟ ಕೈಬಿಡಲ್ಲ:

ಜಾತಿ ಪ್ರಮಾಣ ಪತ್ರ ನೀಡುವವರೆಗೂ ತಳವಾರ ಮತ್ತು ಪರಿವಾರದವರ ಹೋರಾಟ ಮುಂದುವರಿಯುತ್ತಲೇ ಇರುತ್ತದೆ. ಸಂವಿಧಾನ ಬದ್ದ ಹಕ್ಕು ಪಡೆಯಲು ಯಾವುದೇ ತ್ಯಾಗಕ್ಕೂ ಸಿದ್ದರಾಗಿದ್ದೇವೆ. ಸರ್ಕಾರ ಹೋರಾಟ ಹತ್ತಿಕ್ಕಿದಷ್ಟು ನಮ್ಮ ಬಲ ಹೆಚ್ಚಾಗಲಿದೆ. ಕಳೆದ 30 ವರ್ಷಗಳಿಂದ ಹೋರಾಟ ಹಮ್ಮಿಕೊಂಡು ಬಂದಿರುವ ನಮಗೆ ಈ ಆರು ತಿಂಗಳ ಹೋರಾಟ ಯಾವುದೇ ಲೆಕ್ಕಕ್ಕಿಲ್ಲ. ಜೀವ ಹೋದರೂ ಸರಿಯೇ ಜಾತಿ ಪ್ರಮಾಣ ಪತ್ರ ಪಡೆಯುವವರೆಗೂ ನಮ್ಮ ಹೋರಾಟ ನಿಲ್ಲದು. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಕೇಂದ್ರ ಸರ್ಕಾರದ ರಾಜ್ಯಪತ್ರವನ್ನು ಯಥಾವತ್ತಾಗಿ ಅನುಷ್ಟಾನಗೊಳಿಸಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದ್ದು ಸಂಭವನೀಯ ಅನಾಹುತಗಳಿಗೆ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮುಖಂಡರಾದ ಸಾಯಬಣ್ಣ ಬಾಗೇವಾಡಿ, ಶಂಕರ ಜಮಾದಾರ, ಮಲ್ಲು ಉತ್ನಾಳ, ಚಂದು ಅಲ್ಲಾಪುರ, ರಾಜು ಸೀತಿಮನಿ, ಆನಂದ ಗೊರಗೊಂಡಗಿ, ಶಿವಾನಂದ ನಾಟಿಕಾರ, ಸಿದ್ದರಾಮ ಕೋಳಿ, ದಶರಥ ನಾಟಿಕಾರ, ಬಸವರಾಜ ಯಲಗೋಡ, ವಿಜಯಕುಮಾರ ಸಾಲವಾಡಗಿ, ಅಡಿವೆಪ್ಪ ಮೆಟಗಾರ, ಚಂದ್ರು ಮೆಟಗಾರ, ರಮೇಶ ಕಡ್ಲೆವಾಡ, ರಾಜು ಮೆಟಗಾರ, ಶಂಕರ ಜಮಾದಾರ, ರಾಜು ಕೋಳಿ, ಆಕಾಶ ಬೂದಿಹಾಳ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net