

ಶಿರಾ: ಯಾವ ವಿದ್ಯಾರ್ಥಿ ವಿದ್ಯಾಭ್ಯಾಸ ಸಮಯದಲ್ಲಿ ಪರಿಶ್ರಮ ಹಾಕಿ, ತ್ಯಾಗ ಮನೋಭಾವದಿಂದ ಗುರಿಯೆಡೆಗೆ ತಲುಪಲು ಪ್ರತಿನಿತ್ಯ ಶ್ರಮವಹಿಸುತ್ತಾನೋ ಅಂತಹ ವಿದ್ಯಾರ್ಥಿ ಜೀವನದಲ್ಲಿ ಸಮಾಜ ಮೆಚ್ಚುವಂತಹ ಸಾಧನೆ ಮಾಡುತ್ತಾನೆ ಎಂದು ಕನಕ ಗುರು ಪೀಠ ಹೊಸದುರ್ಗ ಶಾಖಾ ಮಠದ ಪೀಠಾಧ್ಯಕ್ಷ ಶ್ರೀ
ಈಶ್ವರಾನಂದಪುರಿ ಸ್ವಾಮೀಜಿ ತಿಳಿಸಿದರು.
ನಗರದ ಶ್ರೀ ರೇವಣಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಶ್ರೀ ಕನಕ ನೌಕರ ಕ್ಷೇಮಾಭಿವೃದ್ಧಿ ಸಂಘಯಿಂದ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭದ ಮಾತನಾಡಿ, ತಳ ಸಮುದಾಯಗಳು ಒಗ್ಗಟಾಗಿ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.
ಹಾಲುಮತ ಸಮುದಾಯದ ಇತಿಹಾಸ ತಿಳಿಸಿದ ರಾಜ್ಯ ಮಾಹಿತಿ ಆಯೋಗದ ಆಯುಕ್ತ ರುದ್ರಣ್ಣ ಹರ್ತಿಕೋಟೆ, ವಿದ್ಯಾರ್ಥಿಗಳು ಪ್ರತಿಭಾ ಪುರಸ್ಕಾರ ಸ್ವೀಕರಿಸಿದ ನಂತರ ಸಾಧನೆ ಮಾಡುವುದನ್ನು ನಿಲ್ಲಿಸಬಾರದು. ಭವಿಷ್ಯದಲ್ಲಿ ಮೂಢನಂಬಿಕೆ ಮತ್ತು ಕಂದಾಚಾರ ನಿಲ್ಲಿಸುವ ಮೂಲಕ ಕನಕದಾಸರ ಆಶಯ ಸಾಕಾರಗೊಳಿಸಬೇಕು. ರಾಜ್ಯದಲ್ಲಿ 3ನೇ ಅತಿ ದೊಡ್ಡ ಜನಸಂಖ್ಯೆ ಇರುವ ಹಾಲುಮತ ಸಮುದಾಯವು ರಾಜಕೀಯ ಪ್ರಾತಿನಿಧ್ಯ ಪಡೆಯುವ ಮೂಲಕ ಕೆಳ ಸಮುದಾಯದ ಜನರ ಏಳಿಗೆಗೆ ಶ್ರಮಿಸಬೇಕು ಎಂದರು. ಅಬಕಾರಿ ಇಲಾಖೆ ಉಪಾಧೀಕ್ಷಕ ವಿ.ಶೇಖರಪ್ಪ ಮಾತನಾಡಿ, ಜೀವನದಲ್ಲಿ ಎಲ್ಲರೂ ಪ್ರತಿಭಾನ್ವಿತರೆ. ಆದರೆ, ಪರಿಶ್ರಮ ಹಾಕುವಲ್ಲಿ ಕೆಲವರು ಹಿಂದೆ ಬೀಳುತ್ತಾರೆ. ವಿದ್ಯಾರ್ಥಿಗಳು ಗುರಿಯೆಡೆಗೆ ನಿರಂತರವಾಗಿ ನಿಧಾನವಾಗಿಯಾದರೂ
ನಡೆಯುತ್ತಲೇ ಇರಬೇಕು ಎಂದರು.
ಬಿಜೆಪಿ ಮುಖಂಡ ಬಿ.ಕೆ.ಮಂಜುನಾಥ್ ಮಾತನಾಡಿ, ಹಿಂದುಳಿದ ವರ್ಗದ ಪ್ರತಿಯೊಬ್ಬ ಮನುಷ್ಯನು ಸ್ವಂತ ಸಾಮರ್ಥ್ಯದಿಂದ ಬಂದು, ಮೇಲ್ವರ್ಗದ ಜನರಲ್ಲಿ ಭಯ ಹುಟ್ಟಿಸಬೇಕು. ಆಗ ಮಾತ್ರ ಹಕ್ಕುಗಳನ್ನು ಪಡೆಯಲು ಸಾಧ್ಯ. ಜಿಲ್ಲೆಯ ಹಾಲುಮತ ಸಮುದಾಯದ ಎಲ್ಲ ಅಧಿಕಾರಿಗಳು ಧೈರ್ಯವಾಗಿ, ನಿರ್ಭೀತಿಯಿಂದ ತನ್ನ ಕರ್ತವ್ಯ ನಿರ್ವಹಿಸಿ ಸಮಾಜಕ್ಕೆ ಹೆಸರು ತರಲು ಪ್ರಾಮಾಣಿಕ ಪ್ರಯತ್ನ ಮಾಡಿ ಎಂದರು. ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬರಗೂರು ನಟರಾಜ್ ಮಾತನಾಡಿ, ತುಳಿತಕ್ಕೊಳಗಾದ ಕೆಳ ವರ್ಗದ ಜನ ನ್ಯಾಯಕ್ಕಾಗಿ ಸಮಾಜದ ಮುಖಂಡರ ಬಳಿ ಬಂದಾಗ ಅವರಿಗೆ ಪ್ರಾಮಾಣಿಕವಾಗಿ ಸ್ಪಂದಿಸಿ ಆತ್ಮಸ್ಥೈರ್ಯ ತುಂಬವ ಕೆಲಸ ನಿರಂತರವಾಗಿ ನಡೆಯುತ್ತಿದೆ ಎಂದರು.
ನಗರಸಭೆ ಸದಸ್ಯ ಎಸ್.ಎಲ್.ರಂಗನಾಥ್ ಮಾತನಾಡಿ, ನಮ್ಮ ಕ್ಷೇತ್ರದ ಶಾಸಕ ನಮ್ಮ ಸಮುದಾಯದ ಕಾರ್ಯಕ್ರಮಗಳಿಗೆ ಗೈರಾಗುತ್ತಿರುವುದು ಬೇಸರದ ಸಂಗತಿ. 3ನೇ ಅತಿದೊಡ್ಡ ಜನಸಂಖ್ಯೆಯನ್ನು ಹೊಂದಿರುವ ಕುರುಬ ಸಮುದಾಯದ ಎಲ್ಲಾ ಕಾರ್ಯಕ್ರಮಗಳಿಗೂ ಮುಂದಿನ ದಿನಗಳಲ್ಲಿ ಶಾಸಕರು ಕಡ್ಡಾಯವಾಗಿ ಹಾಜರಾಗಲೇಬೇಕು ಎಂದು ವೇದಿಕೆ ಮೇಲಿದ್ದ ಶಾಸಕರ ಪುತ್ರ ಸಂಜಯ್ ಜಯಚಂದ್ರಗೆ ಮನವಿ ಮಾಡಿದರು. ತೇಜಭಾನುಪ್ರಕಾಶ್, ಕಸಾಪ ಅಧ್ಯಕ್ಷ ಬಿ.ಪಿ.ಪಾಂಡುರಂಗಯ್ಯ, ತಾಲೂಕು ವೈದ್ಯಾಧಿಕಾರಿ ಡಾ.ಜಿ.ಸಿದ್ದೇಶ್ವರ, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಎ.ಸುಧಾಕರ್, ಮಧುಗಿರಿ ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಮೋಹನ್, ಕನಕ ನೌಕರರ
ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸುರೇಶ ಹಾಜರಿದ್ದರು.