ತಳ ಸಮುದಾಯಗಳ ಬಲವರ್ಧನೆಗೆ ಶ್ರಮ

14KUDLIGI1
Published on

ಕೂಡ್ಲಿಗಿ: ಶಿಕ್ಷಣದ ಮೂಲಕ ಸಬಲೀಕರಣಗೊಂಡು ಅಸಮಾನತೆ ಹೋಗಲಾಡಿಸಬೇಕು. ಈ ಮೂಲಕ ತಳ ಸಮುದಾಯಗಳು ಅಭಿವೃದ್ಧಿಯಾಗಬೇಕು ಎಂಬುದು ಅಂಬೇಡ್ಕರ್ ಅವರ ಆಶಯವಾಗಿತ್ತು ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ ಹಾಗೂ ದಲಿತ ಪರ ಸಂಘಟನೆಗಳಿಂದ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಮ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಸೋಮವಾರ ಮಾತನಾಡಿದರು. ದೇಶಕ್ಕೆ ಶ್ರೇಷ್ಠ ಸಂವಿಧಾನ ನೀಡಿರುವ ಅಂಬೇಡ್ಕರ್, ಎಲ್ಲರಿಗೂ ಸಮನಾದ ಬದುಕನ್ನು ರೂಪಿಸಲು ಮೀಸಲಾತಿ ಅಳವಡಿಸಿದರು. ಈ ಮೂಲಕ ತಳ ಸಮುದಾಯಗಳನ್ನು ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಸದೃಢಗೊಳಿಸಿದರು.

ಬಾಬು ಜಗಜೀವನರಾಮ್ ಕೂಡ ದೇಶದಲ್ಲಿ ಅಸಮಾನತೆ ಹೋಗಲಾಡಿಸಲು ಶ್ರಮಿಸಿದರು. ಕೃಷಿಗೆ ಪೂರಕವಾದ ಸೌಲಭ್ಯಗಳನ್ನು ಒದಗಿಸಿ, ಹಸಿರು ಕ್ರಾಂತಿ ಮಾಡಿದರು. ಈ ಮಹನೀಯರ ಆದರ್ಶಗಳನ್ನು ನಾವು ಪಾಲಿಸಬೇಕು. ಕ್ಷೇತ್ರದಲ್ಲಿ ಎಸ್ಸಿ, ಎಸ್ಟಿ ಕಾಲನಿಗಳಲ್ಲಿ ಉತ್ತಮ ಸಿಸಿ ರಸ್ತೆ, ಬೀದಿ ದೀಪ, ಕುಡಿಯುವ ನೀರು, ಶಿಕ್ಷಣಕ್ಕೆ ಸೌಲಭ್ಯಗಳನ್ನು ಒದಗಿಸಿದ್ದೇನೆ ಎಂದು ತಿಳಿಸಿದರು.

ಹಬೊಹಳ್ಳಿ ಜಿವಿಪಿವಿ ಸರ್ಕಾರಿ ಪದವಿ ಕಾಲೇಜಿನ ಉಪನ್ಯಾಸಕ ಅಕ್ಕಿ ಬಸವೇಶ ಉಪನ್ಯಾಸ ನೀಡಿದರು. ಇದಕ್ಕೂ ಮುನ್ನ ಪಟ್ಟಣದ ಅಂಬೇಡ್ಕರ್ ಕಾಲನಿಯಿಂದ ವಾದ್ಯ ಮೇಳಗಳ ಮೂಲಕ ಮೆರವಣಿಗೆ ನಡೆಸಲಾಯಿತು. ಪಪಂ ಅಧ್ಯಕ್ಷ ಕಾವಲಿ ಶಿವಪ್ಪನಾಯಕ, ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ, ತಹಸೀಲ್ದಾರ್ ವಿ.ಕೆ.ನೇತ್ರಾವತಿ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಗುಂಡುಮುಣುಗು ತಿಪ್ಪೇಸ್ವಾಮಿ, ಅಂಬೇಡ್ಕರ್ ಸಂಘದ ತಾಲೂಕು ಅಧ್ಯಕ್ಷ ಗುಣಸಾಗರ ಕೃಷ್ಣಪ್ಪ, ಬಾಬು ಜಗಜೀವನರಾಮ್ ಸಂಘದ ತಾಲೂಕು ಅಧ್ಯಕ್ಷ ಸಾಸಲವಾಡ ಶಿವಣ್ಣ, ಪಪಂ ಸದಸ್ಯರಾದ ರೇಣುಕಾ ದುರುಗೇಶ್, ಕೆ.ಈಶಪ್ಪ, ರಾಘವೇಂದ್ರ, ಎಸ್.ದುರುಗೇಶ್, ಡಿ.ಎಚ್.ದುರುಗೇಶ್, ಬಂಡೆ ರಾಘವೇಂದ್ರ, ಸಾಲುಮನಿ ರಾಘವೇಂದ್ರ, ದೀನಾ ಮಂಜುನಾಥ, ಸೈಯ್ಯದ್ ಶುಕೂರ್, ಜಿ.ಓಬಣ್ಣ, ಗುನ್ನಳ್ಳಿ ರಾಘವೇಂದ್ರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net