ತಲೆಮರೆಸಿಕೊಂಡಿದ್ದ ಆರೋಪಿಗಳಿಬ್ಬರ ಸೆರೆ

madu santosh
Published on

ಶಿವಮೊಗ್ಗ: ಮಹಿಳೆ ಅಡ್ಡಗಟ್ಟಿ ಹಲ್ಲೆ ನಡೆಸಿದ ಹಾಗೂ ಅಕ್ರಮ ಮರಳು ಮಾರಾಟದ ಪ್ರತ್ಯೇಕ ಪ್ರಕರಣದಲ್ಲಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ ಆರೋಪಿಗಳಿಬ್ಬರನ್ನು ತುಂಗಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಗರದ ಮಲ್ಲಿಕಾರ್ಜುನ ಬಡಾವಣೆಯ ಸಂತೋಷ್ (26) ಹಾಗೂ ನ್ಯೂ ಮಂಡ್ಲಿಯ ಮಧು ಅಲಿಯಾಸ್ ಬಬ್ಲು (25) ಬಂಧಿತರು. 2017ರಲ್ಲಿ ಮಹಿಳೆಯೊಬ್ಬರನ್ನು ಅಡ್ಡಗಟ್ಟಿದ್ದ ಸಂತೋಷ್ ಹಲ್ಲೆ ಕೂಡ ನಡೆಸಿದ್ದ. ಈ ಬಗ್ಗೆ ಮಹಿಳೆ ನೀಡಿದ ದೂರಿನ ಮೇರೆಗೆ ಪೊಲೀಸರು ಸಂತೋಷ್​ನನ್ನು ಬಂಧಿಸಿದ್ದರು. ಆದರೆ ಜಾಮೀನಿನ ಮೇಲೆ ಹೊರಬಂದಿದ್ದ ಸಂತೋಷ್ ಎರಡೂವರೆ ವರ್ಷದಿಂದ ವಿಚಾರಣೆಗೆ ಹಾಜರಾಗದ ಕಾರಣ ನ್ಯಾಯಾಲಯ ಬಂಧನ ವಾರೆಂಟ್ ಜಾರಿ ಮಾಡಿತ್ತು.

ಅಕ್ರಮ ಮರಳು ಮಾರಾಟ ಪ್ರಕರಣದಲ್ಲಿ 2 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದ ನ್ಯೂ ಮಂಡ್ಲಿಯ ಮಧು ಅಲಿಯಾಸ್ ಬಬ್ಲು (25) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. 2016ನೇ ಸಾಲಿನಲ್ಲಿ ದಾಖಲಾಗಿದ್ದ ಪ್ರಕರಣದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಮಧು ವಿರುದ್ಧ ನ್ಯಾಯಾಲಯವು ದಸ್ತಗಿರಿ ವಾರೆಂಟ್ ಹೊರಡಿಸಿತ್ತು.

ಆರೋಪಿಗಳ ಪತ್ತೆಗೆ ತುಂಗಾನಗರ ಠಾಣೆ ಮುಖ್ಯ ಪೇದೆ ಸೋಮಾನಾಯ್ಕ ಮತ್ತು ಪೇದೆ ಮಾಲತೇಶ್ ಅವರನ್ನು ನಿಯೋಜಿಸಿದ್ದು, ಆರೋಪಿಗಳ ವಿಳಾಸದಲ್ಲಿ ಇರುವ ಬಗ್ಗೆ ಖಚಿತ ಮಾಹಿತಿ ಪಡೆದು ಬಂಧಿಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net