

ಚಿತ್ರದುರ್ಗ: ಯುವಕ ತರುಣ್ ಕಿರುಕುಳದಿಂದಲೇ ಚಿತ್ರಾ ಡಾನ್ ಬಾಸ್ಕೋ ಕಾಲೇಜಿನ ವಿದ್ಯಾರ್ಥಿನಿ ಪ್ರೇಮಾ ಮಹಡಿಯಿಂದ ಜಿಗಿದು ಮೃತಪಟ್ಟಿದ್ದು, ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಪಾಲಕರು, ಸಾರ್ವಜನಿಕರು, ವಿದ್ಯಾರ್ಥಿಗಳು ಬುಧವಾರ ಪ್ರತಿಭಟನೆ ನಡೆಸಿದರು.
ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ತರುಣ್ ವಿರುದ್ಧ ಆಕ್ರೋಶ ಹೊರಹಾಕಿದರು. ಕಾನೂನಾತ್ಮಕವಾಗಿ ಕ್ರಮ ಕೈಗೊಂಡು ನೊಂದ, ದುಃಖತಪ್ತ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಗೃಹಸಚಿವರಿಗೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.
ಯುವಕ ಪದೇ ಪದೆ ಪ್ರೀತಿಸುವಂತೆ ಸಾಮಾಜಿಕ ಜಾಲತಾಣಗಳ ಮೂಲಕ ಮೆಸೇಜ್ ಕಳುಹಿಸುತ್ತಿದ್ದ. ಇದಕ್ಕೆ ಯುವತಿ ನಿರಾಕರಿಸಿದ್ದು, ಬೆದರಿಕೆ ಹಾಗೂ ಕಿರುಕುಳ ತಾಳಲಾರದೆ ಮೃತಪಟ್ಟಿದ್ದು, ತರುಣ್ ಬಂಧಿಸಲು ಸೂಚಿಸಬೇಕು. ಇಲ್ಲದಿದ್ದರೆ, ವಿವಿಧ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚಿತ್ರದುರ್ಗ ಬಂದ್‌ಗೂ ಕರೆ ನೀಡಲಾಗುವುದು ಎಂದು ಎಚ್ಚರಿಸಿದರು.
ಮೃತ ವಿದ್ಯಾರ್ಥಿನಿಯ ತಂದೆ ಸುಧಾಕರ್, ತಾಯಿ ವನಿತಾ, ಸತೀಶ್, ರಮೇಶ್, ಸರೋಜಮ್ಮ, ಅರುಣ್, ರವಿ, ಸೋಮಶೇಖರ್, ವಸಂತ್‌ಕುಮಾರ್, ರಾಜೇಶ್ ಇತರರಿದ್ದರು.