

ಚಿತ್ರದುರ್ಗ: ನಗರದ ತರಾಸು ರಂಗಮಂದಿರ ನವೀಕರಣಕ್ಕೆ 80 ಲಕ್ಷ ರೂ. ವೆಚ್ಚದ ಕ್ರಿಯಾ ಯೋಜನೆ ಸಿದ್ಧ ಪಡಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.
ನಗರದ ಲಂಕೇಶ್ ವಿಚಾರ ವೇದಿಕೆ, ನಾಡು-ನುಡಿ ಬಳಗ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ರಂಗಮಂದಿರದಲ್ಲಿ ಭಾನುವಾರ ರಾತ್ರಿ ಏರ್ಪಡಿಸಿದ್ದ ಬಾಬ್ ಮಾರ್ಲಿ ಫ್ರಂ ಕೋಡಿಹಳ್ಳಿ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿ, ರಂಗಮಂದಿರವನ್ನು ಶೀಘ್ರದಲ್ಲೇ ನವೀಕರಿಸಲಾಗುವುದು ಎಂದರು.
ನಗರದ ವಾಲ್ಮೀಕಿ ಭವನವನ್ನು ಕೂಡ ಶೀಘ್ರದಲ್ಲೇ ಸಾರ್ವಜನಿಕರ ಬಳಕೆಗೆ ಕೊಡಲಾಗುವುದು. ಇದಕ್ಕಾಗಿ ಗುರುವಾರ ಸಂಬಂಧಿಸಿದ ಬೆಂಗಳೂರಿಂದ ಕರೆಸಿ ಸೆ.5ರಂದು ಸಭೆ ನಡೆಸಲಾಗುವುದು. ನಾಟಕಗಳನ್ನು ವೀಕ್ಷಿಸುವ ಮೂಲಕ ರಂಗ ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸ ಬೇಕಿದೆ ಎಂದರು.
ಎಡಿಸಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ರಂಗ ಕಲೆಯನ್ನು ಉಳಿಸಿ ಬೆಳೆಸಬೇಕಿದೆ ಎಂದು ತಿಳಿಸಿದರು.
ಪತ್ರಕರ್ತ ಚಿಕ್ಕಪ್ಪನಹಳ್ಳಿ ಷಣ್ಮುಖ ಮಾತನಾಡಿ, ಬಾಬ್ ಮಾರ್ಲಿ ಫ್ರಂ ಕೋಡಿಹಳ್ಳಿ ಅತ್ಯಂತ ಗಂಭೀರ ನಾಟಕವಾಗಿದೆ. ಜಾತಿ ವ್ಯವಸ್ಥೆ ನೋವು ಯಾರಿಗೆ ಇರುತ್ತದೆಯೋ ಅವರಿಗೆ ಈ ನಾಟಕದ ಸೂಕ್ಷ್ಮತೆ ಆರಿವಾಗುತ್ತದೆ ಎಂದರು.
ಕರ್ನಾಟಕ ಮಾಧ್ಯಮ ಆಕಾಡೆಮಿ ಸದಸ್ಯ ಅಹೋಬಲಪತಿ ಅವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ದಿನೇಶ್ ಗೌಡಗೆರೆ, ವೇದಿಕೆ ಸಂಚಾಲಕ ಜಡೇಕುಂಟೆ ಮಂಜುನಾಥ್, ದಾವಣಗೆರೆ ಎಡಿಸಿ ಲೋಕೇಶ್, ಜೆಡಿಎಸ್ ರಾಜ್ಯ ಪ್ರಧಾನ ಕಾರ‌್ಯದರ್ಶಿ ಬಿ.ಕಾಂತರಾಜ್, ಜಯಲಕ್ಷ್ಮಿ, ಕೀರ್ತಿ ಲಕ್ಷ್ಮಣ್, ದಾಸರಹಳ್ಳಿ ರಾಜು, ಉದ್ಯಮಿಗಳಾದ ಅರುಣ್‌ಕುಮಾರ್, ಕೋಡಿಹಳ್ಳಿ ಸಂತೋಷ್ ಮತ್ತಿತರರು ಇದ್ದರು.