

ದಾವಣಗೆರೆ: ವಚನಗಳನ್ನು ಅಧ್ಯಯನ ಮಾಡುವ ಜತೆಗೆ ಸಾಮಾಜಿಕ ಜಾಲತಾಣದ ಮೂಲಕವೂ ಪ್ರಸಾರ ಮಾಬೇಕು ಎಂದು ತರಳಬಾಳು ಮಠದ ಶ್ರೀ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣಮಂಟಪದಲ್ಲಿ ಭಾನುವಾರ ರಾತ್ರಿ ತರಳಬಾಳು ಮಠದಿಂದ ಹಮ್ಮಿಕೊಂಡಿದ್ದ ಬಸವ ಜಯಂತ್ಯುತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ,‘ಶಿವಶರಣರ ವಚನ ಸಂಪುಟ’ ಅಂತರ್ಜಾಲ ಪ್ರಾತ್ಯಕ್ಷಿಕೆ ನೀಡಿ ಮಾತನಾಡಿದರು.
ಹಿಂದೆಲ್ಲ ತಾಳೆಗರಿಯ ಮೂಲಕ ವಚನಗಳನ್ನು ತಲುಪಿಸಲಾಗುತ್ತಿತ್ತು. ಇಂದು ಮೊಬೈಲ್‌ಗಳ ಮೂಲಕ ವಚನಗಳನ್ನು ಇತರರಿಗೆ ತಲುಪಿಸುವ ಪುಣ್ಯಕಾರ್ಯದಲ್ಲಿ ಸಾರ್ವಜನಿಕರು ತೊಡಗಬೇಕು ಎಂದು ಹೇಳಿದರು.
ಮೈಸೂರು ಜಯಚಾಮರಾಜ ಒಡೆಯರ್ ಕಾಲದಲ್ಲಿ ಹಿರಿಯ ಗುರುಗಳು 101 ವಚನಗಳನ್ನು ಅನುವಾದಿಸಿ ಒಡೆಯರ್ ಅವರಿಂದ ಬಿಡುಗಡೆಗೊಳಿಸಿದ್ದರು. ನಂತರ 1968ರಲ್ಲಿ ಸಮಗ್ರ ವಚನಗಳನ್ನು ಭಾಷಾಂತರ ಮಾಡಿಸಿ, ಪ್ರಕಟಿಸಲಾಯಿತು. ಮೊಟ್ಟ ಮೊದಲ ಅನುವಾದ ಕೃತಿ ನಮ್ಮ ಮಠದಿಂದ ಆಗಿತ್ತು ಎಂಬುದು ಹೆಮ್ಮೆಯ ವಿಚಾರ ಎಂದರು.
ಇದೇ ವೇಳೆ ಪ್ರೊ. ಬಸವನಾಳ ಶಿವಲಿಂಗಪ್ಪ ಸಂಪಾದಕತ್ವದ ‘ಬಸವಣ್ಣನವರ ಷಟ್‌ಸ್ಥಳದ ವಚನಗಳು’ ಪುಸ್ತಕವನ್ನು ಸ್ವಾಮೀಜಿ
ಬಿಡುಗಡೆ ಮಾಡಿದರು.
ರೈತ ಮುಖಂಡ ಎಚ್.ಆರ್. ಬಸವರಾಜಪ್ಪ ಮಾತನಾಡಿ, 1968ರಲ್ಲಿ ಬಸವಣ್ಣನವರ ವಚನಗಳನ್ನು ಬಾಂಬೆ ಕರ್ನಾಟಕದ ಪ್ರೊ. ಬಸವನಾಳ ಶಿವಲಿಂಗಪ್ಪ ಪ್ರಕಟಿಸಿದ್ದರು. ಆ ಪುಸ್ತಕ ಸಿಗದ ಕಾರಣಕ್ಕೆ ಶ್ರೀಮಠದಿಂದ ಮರುಮುದ್ರಣ ಮಾಡಿ ಎಲ್ಲರ ಕೈಗೆ ಸಿಗುವಂತೆ ಮಾಡಿರುವುದು ಶ್ಲಾಘನೀಯ ಎಂದರು.
ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಮಾತನಾಡಿ, ವಚನಗಳನ್ನು ಜಾನಪದ ಶೈಲಿಯಲ್ಲಿ ಜನರಿಗೆ ತಲುಪಿಸಲು ನವೀನ ತಂತ್ರಾಂಶ ಉಪಯೋಗಿಸಲಾಗಿದೆ. ವಚನಗಳನ್ನು ನಾವು ಪಾಲಿಸಿ ಮುಂದಿನ ಪೀಳಿಗೆಗೆ ಕೊಡಬೇಕಿದೆ. ಸಾಗರದಾಚೆಗೆ ಥೇಮ್ಸ್ ನದಿಯ ಆಚೆಗೆ ಬಸವಣ್ಣನವರ ವಚನ ತಲುಪಿದೆ. ಮತ್ತಷ್ಟು ಜಾಗತಿಕವಾಗಿ ತಲುಪಲಿ ಎಂದು ಆಶಿಸಿದರು.
ಮುಖ್ಯ ಅತಿಥಿಗಳಾಗಿ ಜರ್ಮನಿಯ ಗೀತಾ ಧರ್ಮಪಾಲ್, ಧಾರವಾಡದ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ಗೌರವ ಕಾರ್ಯದರ್ಶಿ ಚಂದ್ರಕಾಂತ ಮಟ್ಟಿ ಭಾಗವಹಿಸಿದ್ದರು. ತುಮಕೂರಿನ ಸಂಸ್ಕೃತಿ ಚಿಂತಕ ಡಾ. ನಟರಾಜ ಎಸ್. ಬೂದಾಳು ಉಪನ್ಯಾಸ ನೀಡಿದರು. ಪ್ರೊ. ಬಸವನಾಳ ಶಿವಲಿಂಗಪ್ಪ ಸಂಪಾದಕತ್ವದ ‘ಬಸವಣ್ಣನವರ ಷಟ್‌ಸ್ಥಳದ ವಚನಗಳು’ ಪುಸ್ತಕ ಬಿಡುಗಡೆ ಮಾಡಲಾಯಿತು. ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಸ್ವಾಗತಿಸಿದರು. ಎಸ್.ಟಿ.ಉಮೇಶ್ ಕಾರ್ಯಕ್ರಮ ನಿರೂಪಿಸಿದರು.