

ಚಿತ್ರದುರ್ಗ: ಸಿರಿಗೆರೆ ತರಳಬಾಳು ಬೃಹನ್ಮಠ ಹಸಿದವರ ಪಾಲಿಗೆ ತಪೋವನ, ಲಕ್ಷಾಂತರ ಮಕ್ಕಳ ಬಾಳಿಗೆ ಶಿಕ್ಷಣದ ದೀವಿಗೆಯಾಗಿದೆ. ಹೀಗಾಗಿ ಜ್ಞಾನ ಕೈಲಾಸವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬಣ್ಣಿಸಿದರು.
ಶ್ರೀಮಠದಲ್ಲಿ ಲಿಂ. ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ ಪುಣ್ಯಸ್ಮರಣೋತ್ಸವದ 4ನೇ ದಿನದ ಸೋಮವಾರದ ಸಮಾರಂಭದಲ್ಲಿ ಮಾತನಾಡಿದರು.
ಹಿರಿಯ ಗುರುಗಳ ಹಾದಿಯಲ್ಲೇ ಮುನ್ನಡೆಯುತ್ತ ಸಮಾಜಮುಖಿಯಾಗಿ ಸಮಾಜವನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯುವ ಕೆಲಸ ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀಗಳು ಮಾಡುತ್ತಿದ್ದಾರೆ. ಕೃಷಿ ಕುರಿತು ಹೆಚ್ಚು ಒಲವು ಹೊಂದಿರುವ ಅವರಿಂದಾಗಿ ಈ ಭಾಗಕ್ಕೆ ನೀರಾವರಿ ಯೋಜನೆ ಜಾರಿಯಾಗಲು ಸಾಧ್ಯವಾಗಿದೆ. ಸಾಸ್ವೆಹಳ್ಳಿಯ ಲಿಫ್ಟ್ ಇರಿಗೇಷನ್ ಯೋಜನೆಗೆ ಸೆ. 24ರಂದು ಚಾಲನೆ ದೊರೆಯಲಿದ್ದು, ಅದಕ್ಕೂ ಗುರುಗಳೇ ಕಾರಣ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಉತ್ತಮರನ್ನು ಕಾಯಲು ದೈವವಿದೆ: ರಾಜಕೀಯ, ಧಾರ್ಮಿಕ, ಸಾಮಾಜಿಕ ಸೇರಿ ಎಲ್ಲ ಕ್ಷೇತ್ರಗಳಲ್ಲೂ ಸಮಸ್ಯೆ ಉಲ್ಬಣವಾಗುತ್ತಿವೆ. ಉತ್ತಮ ಕೆಲಸ ಮಾಡುವವರಿಗೆ, ಮುಂದಾಳತ್ವ ತೆಗೆದುಕೊಳ್ಳುವವರಿಗೆ ಅಡ್ಡಿಪಡಿಸಲು ಸಾಕಷ್ಟು ಮಂದಿ ಇದ್ದಾರೆ. ಆದರೆ, ಕಾಯಲು ದೈವ ಇರುವಾಗ ಯಾರಿಗೂ ಅಂಜುವ, ಹೆದರುವ ಅಗತ್ಯವಿಲ್ಲ ಎಂದರು.
ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದಾಗ ಸಾಕಷ್ಟು ಜನೋಪಯೋಗಿ ಯೋಜನೆಗಳನ್ನು ರಾಜ್ಯದ ಜನರಿಗೆ ನೀಡಿದ್ದಾರೆ. ನಾನೂ ಶಿಕಾರಿಪುರದಲ್ಲಿ ಶಾಸಕನಾಗಲು, ಬಿಜೆಪಿಯಲ್ಲಿ ಉನ್ನತ ಹುದ್ದೆ ತಲುಪಲು ಈಗಿನ ಗುರುಗಳ ಆಶೀರ್ವಾದವೂ ಕಾರಣ ಎಂದು ಹೇಳಿದರು.
ಎಷ್ಟು ಸಾಧಿಸಿದ್ದೇವೆ ಎಂಬುದು ಮುಖ್ಯವಲ್ಲ. ಪಾಲಕರು ನನ್ನ ಮಗ-ಮಗಳು ಎಂಬುದನ್ನು ಸಮಾಜಕ್ಕೆ ಹೆಮ್ಮೆಯಿಂದ ಪರಿಚಯಿಸುವಂತೆ ಮಕ್ಕಳು ಬೆಳೆಯಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ವಿಶ್ವ ಗುರುವಾಗಿಸುವಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದು, ಭಾರತದ ಚಿತ್ರಣ ಬದಲಿಸುತ್ತಿದ್ದಾರೆ ಎಂದು ಹೇಳಿದರು.
ನಿವೃತ್ತ ಪ್ರಾಚಾರ್ಯ ಡಾ.ನಾ.ಲೋಕೇಶ್ ಒಡೆಯರ್ ಮಾತನಾಡಿ, ಮದುವೆ, ಗೃಹಪ್ರವೇಶ, ಕೈಲಾಸ ಶಿವಗಣಾರಾಧನೆಯನ್ನು ಸರ್ವ ಶರಣರ ಸಮ್ಮೇಳನವನ್ನಾಗಿ ಲಿಂ. ಶಿವಕುಮಾರ ಶ್ರೀ ಬದಲಿಸಿದರು. ಹೀಗಾಗಿ ತರಳಬಾಳು ಬೃಹನ್ಮಠ ಬೇರೆ ಮಠಗಳಿಗೆ ಮಾದರಿಯಾಗಲು ಕಾರಣವಾಗಿದೆ ಎಂದು ತಿಳಿಸಿದರು.
ಅಜ್ಞಾನವೇ ಎಲ್ಲ ಅನರ್ಥಗಳಿಗೆ ಕಾರಣ. ಅದಕ್ಕಾಗಿ ಸಿರಿಗೆರೆಯಲ್ಲಿ ವಿವಿಧೋದ್ದೇಶ ಪ್ರೌಢಶಾಲೆ, ನಾಗರಿಕ ಸೌಲಭ್ಯ ಇಲ್ಲದ, ಅವಕಾಶ ವಂಚಿತ ಗ್ರಾಮೀಣ ಭಾಗಗಳ ಕಡೆ ಶಾಲೆಗಳನ್ನು ತೆರೆದರು. ಲಕ್ಷಾಂತರ ಮಂದಿಯ ಬಾಳಿಗೆ ಬೆಳಕಾದರು. ಸುಶಿಕ್ಷಿತರನ್ನಾಗಿ ಮಾಡುವಲ್ಲಿ ಅವರ ಕೊಡುಗೆ ಅಪಾರ. ಔದ್ಯೋಗಿಕ, ವ್ಯವಹಾರಿಕ, ಆಧ್ಯಾತ್ಮಿಕ ಶಿಕ್ಷಣದಿಂದ ಪ್ರಗತಿ ಸಾಧ್ಯ ಎಂಬುದನ್ನು ಸಾಧಿಸಿ ತೋರಿಸಿದ ಮಹನೀಯರು ಹಿರಿಯ ಗುರುಗಳು ಎಂದು ಬಣ್ಣಿಸಿದರು.
ಭ್ರಷ್ಟ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ. ಹೀಗಾಗಿ ಬಸವಾದಿ ಶರಣರು ಎಲ್ಲರಿಗೂ ಆದರ್ಶ. ಅವರ ತತ್ವಾದರ್ಶ ಜನರ ಮನಸ್ಸಿನಲ್ಲಿ ಬಿತ್ತಿ, ಶಾಲಾ-ಕಾಲೇಜು, ವಸತಿ ನಿಲಯ, ದಾಸೋಹ ಭವನ ಸ್ಥಾಪಿಸುವುದು ಸೇರಿ ಸಮಾಜಮುಖಿ ಕಾರ್ಯಗಳಿಗೆ ಹೆಚ್ಚು ಒತ್ತು ನೀಡಿದರು ಎಂದು ಸ್ಮರಿಸಿಕೊಂಡರು.
ಬೆಂಗಳೂರಿನ ಬಿ.ಎಸ್.ವಿವಿಯ ಕುಲಪತಿ ಸೂರ್ಯಪ್ರಕಾಶ್ ಮಾತನಾಡಿ, ಮಕ್ಕಳು ಹಿರಿಯರ ತ್ಯಾಗ ಮನೋಭಾವ ಮೈಗೂಡಿಸಿಕೊಂಡು ಸತ್ಪ್ರಜೆಗಳಾಗಿ ಬಾಳಬೇಕು. ತಂತ್ರಜ್ಞಾನ ಸಾಕಷ್ಟು ಮುಂದುವರಿದಿದ್ದು, ಅದನ್ನು ಬಳಸಿಕೊಂಡು ಹೆಚ್ಚು ಇಳುವರಿ ಪಡೆದು, ಆದಾಯ ಹೆಚ್ಚಿಸಿಕೊಳ್ಳಲು ಸಹಕಾರಿಯಾಗಿದೆ ಎಂದರು.
ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡ್ರು ಮಾತನಾಡಿ, ಹಿರಿಯ ಶ್ರೀಗಳು ತರಳಬಾಳು ಮಠವನ್ನು ದೇಶಕ್ಕೆ ಪರಿಚಯಿಸಿದರೆ, ಈಗಿನ ಗುರುಗಳು ವಿಶ್ವ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಶ್ರೀಮಠದ ಇತ್ತೀಚಿನ ಬೆಳವಣಿಗೆಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಸದಾ ಕಾಲ ಮಠದ ಗೌರವ, ಘನತೆಯೂ ಹೆಚ್ಚಾಗಲಿದೆ ಎಂದರು.
ಕೃಷಿ ವಿಜ್ಞಾನಿ ಡಾ.ಎಸ್.ಎಲ್.ಕೃಷ್ಣಮೂರ್ತಿ ಮಾತನಾಡಿ, ಒಂದು ಹನಿ ನೀರೂ ಜೀವಜಲ. ಹೀಗಾಗಿ ಅನಗತ್ಯ ವ್ಯರ್ಥ ಮಾಡಬಾರದು. ಮಣ್ಣಿನ ಫಲವತ್ತತೆ ಕಳೆದುಕೊಳ್ಳಬಾರದು. ಒನ್ ಡ್ರಾಪ್, ಮೋರ್ ಕ್ರಾಪ್ ಕುರಿತು ರೈತರು ಆಲೋಚಿಸಿ ಹೆಚ್ಚು ಇಳುವರಿ ಕಂಡುಕೊಳ್ಳಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ಹೊಸ ವಿನ್ಯಾಸದಲ್ಲಿ ಬಸವಣ್ಣನವರ 30 ವಚನಗಳುಳ್ಳ ಅಣ್ಣನವರ ನುಡಿ ಮುತ್ತು ಭಾಗ 1 ಹಾಗೂ ಶಿವಕುಮಾರ ಶ್ರೀಗಳ ಗುರುವಾಣಿ ಕಿರು ಪುಸ್ತಕವನ್ನು ಲೋಕಾರ್ಪಣೆಗೊಳಿಸಲಾಯಿತು.
ಡಾ. ಶಿವಮೂರ್ತಿ ಶಿವಾಚಾರ್ಯ ಶ್ರೀ ನೇತೃತ್ವ ವಹಿಸಿದ್ದರು. ಎಂಎಲ್ಸಿ ಕೆ.ಎಸ್.ನವೀನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್‌ಕುಮಾರ್ ಬಂಡಾರು, ಸಾಧು ಸಧರ್ಮ ವೀರಶೈವ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ಇತರರಿದ್ದರು.