

ಸಾಲಿಗ್ರಾಮ: ಶಿಕ್ಷಕರು ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸುವ ಕೆಲಸ ಮಾಡಬೇಕು ಎಂದು ಹರದನಹಳ್ಳಿ ಗ್ರಾಮದ ಸಿವಿಲ್ ಇಂಜಿನಿಯರ್ ಎಚ್.ಎನ್.ರಮೇಶ್ ಸಲಹೆ ನೀಡಿದರು.
ಹರದನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ತರಬೇತಿ ನೀಡಿದರೆ ಕ್ರೀಡೆ ಮತ್ತು ಸಾಂಸ್ಕೃತಿಕವಾಗಿ ಉತ್ತಮ ಸಾಧನೆ ಮಾಡುತ್ತಾರೆ. ತರಬೇತಿ ಇಲ್ಲದೆ ಕಾಟಾಚಾರದ ಪ್ರತಿಭಾ ಕಾರಂಜಿ ನಡೆದರೆ, ನಿಜವಾದ ಪ್ರತಿಭಾವಂತರಿಗೆ ಅನ್ಯಾಯವಾಗುತ್ತದೆ. ಹಾಗಾಗಿ ಎಲ್ಲ ಶಾಲೆಯ ಮಕ್ಕಳನ್ನು ನಮ್ಮ ಶಾಲೆಯ ಮಕ್ಕಳೆಂದು ತಿಳಿದು ತರಬೇತಿ ನೀಡಿ ಉತ್ತಮ ಪ್ರದರ್ಶನ ಪ್ರದರ್ಶಿಸಲು ಪ್ರೋತ್ಸಾಹಿಸಬೇಕು. ಇಂತಹ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಭಾಗವಹಿಸುವಂತೆ ಅವಕಾಶ ಕಲ್ಪಿಸಿ ಕೊಡಬೇಕು ಎಂದು ಅಭಿಪ್ರಾಯಪಟ್ಟರು.
ಹರದನಹಳ್ಳಿ ಶಾಲೆಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ವಿಭಾಗದಲ್ಲಿ ಹಳೇ ವಿದ್ಯಾರ್ಥಿಗಳು ಮತ್ತು ಪ್ರಸ್ತುತ ಸಾಲಿನ ವಿದ್ಯಾರ್ಥಿಗಳು ಕ್ರೀಡೆ ಮತ್ತು ಪ್ರತಿಭಾ ಕಾರಂಜಿ ಕಾರ್ಯಕ್ರಮಗಳಲ್ಲಿ ಈಗಾಗಲೇ ತಮ್ಮದೇ ಆದ ಸಾಧನೆ ಮಾಡಿದ್ದಾರೆ. ಇತ್ತೀಚೆಗೆ ನಡೆದ ಶ್ರೀ ಭೈರವೇಶ್ವರ ವಲಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಹರದನಹಳ್ಳಿ ಶಾಲೆಯ ಮಕ್ಕಳು ಚಾಂಪಿಯಶಿಪ್ ಪಡೆದಿರುವುದು ನಮ್ಮೆಲ್ಲರಿಗೆ ಹೆಮ್ಮೆ ವಿಚಾರ ಎಂದರು.
ಕಾರ್ಯಕ್ರಮದಲ್ಲಿ ಛದ್ಮವೇಷ ಧರಿಸಿದ್ದ ಮಕ್ಕಳು ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದರು.
ಹರದನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರದೀಪ್, ಶೀಗವಾಳ ಗ್ರಾಪಂ ಅಧ್ಯಕ್ಷೆ ಪವಿತ್ರಾ, ಉಪಾಧ್ಯಕ್ಷ ಕೃಷ್ಣೇಗೌಡ, ಸದಸ್ಯರಾದ ಮಂಜುಳಾ ರಮೇಶ್, ಮಂಜುಳಾ ಚಂದ್ರು, ನವೀನ್, ಎಸ್‌ಡಿಎಂಸಿ ಅಧ್ಯಕ್ಷ ರಮೇಶ್, ಸಿಆರ್‌ಪಿ ಧರಣಿ, ಪ್ರೌಢಶಾಲೆ ದೈಹಿಕ ಶಿಕ್ಷಣ ಶಿಕ್ಷಕ ಹುಸೇನ್ ಪಾಷಾ, ಹೆಬ್ಸೂರು ಶಾಲಾ ಶಿಕ್ಷಕ ಕುಮಾರ್, ಹರದನಹಳ್ಳಿ ರಮೇಶ್, ರೇಣುಕಾ, ಬೆಟ್ಟಳ್ಳಿ ಗುರು ಇತರರು ಇದ್ದರು.