

ಮದ್ದೂರು: ಅಂಗವಿಕಲ ಮಕ್ಕಳಲ್ಲೂ ಅಸಾಧಾರಣ ಪ್ರತಿಭೆ ಇರುತ್ತದೆ. ಇದನ್ನು ಗುರುತಿಸಿ, ತರಬೇತಿ ನೀಡಿ ಸೂಕ್ತ ವೇದಿಕೆ ಕಲ್ಪಿಸಿಕೊಟ್ಟರೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುತ್ತಾರೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ಪಟ್ಟಣದ ಗುರುಭವನದಲ್ಲಿ 2024- 25 ನೇ ಸಾಲಿನಲ್ಲಿ ಸರ್ವ ಶಿಕ್ಷಣ ಕರ್ನಾಟಕ ಹಾಗೂ ಅಲಿಂಕೋ ವತಿಯಿಂದ ಶುಕ್ರವಾರ ನಡೆದ ಉಚಿತ ವೈದ್ಯಕೀಯ ಮೌಲ್ಯಾಂಕನ ಶಿಬಿರ ಹಾಗೂ ವಿವಿಧ ನ್ಯೂನತೆಯುಳ್ಳ ಒಟ್ಟು 72 ಮಕ್ಕಳಿಗೆ ಸಾಧನ ಸಲಕರಣೆಗಳನ್ನು ವಿತರಿಸಿ ಅವರು ಮಾತನಾಡಿದರು.
ಹಲವಾರು ಅಂಗವಿಕಲ ಮಕ್ಕಳು ತಮ್ಮ ಅಂಗವೈಕಲ್ಯತೆಯನ್ನು ಬದಿಗಿಟ್ಟು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದ್ವೀತಿಯ ಸಾಧನೆ ಮಾಡಿದ್ದಾರೆ. ಅವರನ್ನು ಆದರ್ಶವಾಗಿಟ್ಟು ನೀವು ಕೂಡ ಸಾಧನೆ ಮಾಡಲು ಮುನ್ನುಗ್ಗಬೇಕೆಂದು ಕಿವಿಮಾತು ಹೇಳಿದರು.
ಸರ್ಕಾರ ಅಂಗವಿಕಲರಿಗೆ ಹಲವಾರು ಸೌಲಭ್ಯಗಳನ್ನು ನೀಡುತ್ತಿದೆ ಇದನ್ನು ಸದ್ಬಳಕೆ ಮಾಡಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಕದಲೂರು ಉದಯ್ ಚಾರಿಬಟಲ್ ಟ್ರಸ್ಟ್ ವತಿಯಿಂದಲೂ ಹಲವಾರು ವರ್ಷಗಳಿಂದ ಅಂಗವಿಕಲರಿಗೆ ವೈಯಕ್ತಿವಾಗಿ ಸಹಾಯ ಮಾಡಿಕೊಂಡು ಬರುತ್ತಿದ್ದೇನೆ ಎಂದರು.
1 ರಿಂದ 10ನೇ ತರಗತಿವರೆಗಿನ ವ್ಯಾಸಂಗ ಮಾಡುತ್ತಿರುವ ವಿವಿಧ ನ್ಯೂನ್ಯತೆಯುಳ್ಳ 72 ಮಕ್ಕಳಿಗೆ ಟಿಎಲ್‌ಎಂ ಕಿಟ್, ಸಿಪಿ ಚೇರ್, ಹಿಯರಿಂಗ್, ವ್ಹೀಲ್‌ಚೇರ್ ಸೇರಿದಂತೆ ಇನ್ನಿತರ ಉಪಕರಣಗಳನ್ನು ವಿತರಿಸಲಾಯಿತು.
ಪುರಸಭಾ ಅಧ್ಯಕ್ಷೆ ಕೋಕಿಲಾ ಅರುಣ್, ಉಪಾಧ್ಯಕ್ಷ ಟಿ.ಆರ್.ಪ್ರಸನ್ನಕುಮಾರ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರವೀಶ್, ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಎಸ್.ರವೀಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ದೇವರಾಜು, ಬಿಇಒ ಧನಂಜಯ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ರಾಜೇಶ್ವರಿ ಸೇರಿದಂತೆ ಇತರರಿದ್ದರು.