

ಚಿಕ್ಕಬಳ್ಳಾಪುರ : ಪ್ರತಿ ಜಿಲ್ಲೆಯಲ್ಲೂ ಉದ್ಯೋಗ ಆಧಾರಿತ ಶಿಕ್ಷಣ ತರಬೇತಿ ಕೇಂದ್ರ ತೆರೆಯಲು ಚಿಂತಿಸಲಾಗಿದೆ ಎಂದು ಜವಳಿ ಮತ್ತು ಕೈ ಮಗ್ಗ ಇಲಾಖೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಶ್ರೀಮಂತ ಬಾಳಸಾಹೇಬ ಪಾಟೀಲ ತಿಳಿಸಿದರು.
ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಬುಧವಾರ ಜವಳಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.ರಾಜ್ಯದ ನೇಕಾರರಿಗೆ ಮುಂದಿನ ದಿನಗಳಲ್ಲಿ ಗುರುತಿನ ಚೀಟಿ ನೀಡಲಾಗುತ್ತದೆ. ನೇಕಾರ್ ಸಮ್ಮಾನ್ ಯೋಜನೆಯಡಿ ಪ್ರತಿ ನೇಕಾರರಿಗೆ ತಲಾ 2000 ಸಾವಿರ ರೂ. ಸಹಾಯಧನ ನೀಡಲು ಈಗಾಗಲೇ ಅರ್ಜಿ ಆಹ್ವಾನಿಸಲಾಗಿದ್ದು ರಾಜ್ಯಾದ್ಯಂತ ಇರುವ 54 ಸಾವಿರ ಕೈ ಮಗ್ಗ ನೇಕಾರರ ಪೈಕಿ 41 ಸಾವಿರ ಅರ್ಜಿಗಳು ಸಲ್ಲಿಕೆಯಾಗಿವೆ. 39 ಸಾವಿರ ಮಂದಿ ಕೈ ಮಗ್ಗ ನೇಕಾರರ ಖಾತೆಗಳಿಗೆ ಮತ್ತು ಪವರ್ ಲೂಮ್ ನೇಕಾರರ ಪೈಕಿ 47 ಸಾವಿರ ಮಂದಿ ಅರ್ಜಿ ಸಲ್ಲಿಸಿದ್ದು 42 ಸಾವಿರ ಮಂದಿಯ ಖಾತೆಗೆ ಹಣ ಜಮೆ ಮಾಡಲಾಗಿದೆ ಎಂದರು.
ಜಿಲ್ಲೆಯಲ್ಲಿರುವ ಅಲ್ಪಸಂಖ್ಯಾತರ ಮಾದರಿ ವಸತಿ ಶಾಲೆಗಳು, ಮುರಾರ್ಜಿ ದೇಸಾಯಿ ಸೇರಿ ಇತರ ವಸತಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಕಡಿಮೆಯಾಗಿದೆ. ಇದಕ್ಕೆ ದಾಖಲಾತಿ ಹೆಚ್ಚಳಕ್ಕೆ ಸಂಬಂಧಪಟ್ಟ ಶಾಲೆಯ ಪ್ರಾಂಶುಪಾಲರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವುದರ ಜತೆಗೆ ಸವಲತ್ತುಗಳ ಅರಿವು ಮೂಡಿಸಬೇಕು ಎಂದರು.
ಜವಳಿ ಮತ್ತು ಕೈಮಗ್ಗ ಇಲಾಖೆಯ ಉಪ ನಿರ್ದೇಶಕ ಶಿವಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ 790 ಕೈ ಮಗ್ಗಗಳು, 1342 ವಿದ್ಯುತ್ ಕೈ ಮಗ್ಗಗಳು, 11 ಜವಳಿ ಘಟಕಗಳು, 12 ಕೈಮಗ್ಗ ಸಹಕಾರಿ ಸಂಘಗಳು, ಜವಳಿ ನೀತಿಯಡಿ 6 ತರಬೇತಿ ಕೇಂದ್ರಗಳಿವೆ. 1000 ರೇಷ್ಮೆ ನೂಲು ಬಿಚ್ಚಾಣಿಕೆ ಘಟಕಗಳಿವೆ. ಸೇವಾ ಸಿಂದು ಆನ್‌ಲೈನ್ ಮೂಲಕ 882 ನೇಕಾರ ಅರ್ಜಿ ಸಲ್ಲಿಸಿದ್ದು ಈ ಪೈಕಿ 507 ನೇಕಾರರಿಗೆ ಸಹಾಯಧನ ಸಿಕ್ಕಿದೆ ಎಂದರು.
ಜಿಪಂ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಸಿ.ರಾಜಾಕಾಂತ್, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಮುನಿಯಪ್ಪ, ಕೈ ಮಗ್ಗ ಮತ್ತು ಜವಳಿ ಇಲಾಖೆಯ ಆಯುಕ್ತ ಉಪೇಂದ್ರ ಪ್ರತಾಪ್ ಸಿಂಗ್, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ನಿರ್ದೇಶಕ ಪಾಷಾ, ಜಿಲ್ಲಾಧಿಕಾರಿ ಆರ್.ಲತಾ, ಜಿಪಂ ಸಿಇಒ ಬಿ.ಫೌಜಿಯಾ ತರನ್ನುಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ ಮಿಥುನ್ ಕುಮಾರ್, ಜಿಲ್ಲಾ ಅಲ್ಪ ಸಂಖ್ಯಾತರ ಇಲಾಖಾಧಿಕಾರಿ ಶರೀಫ್ ಮತ್ತಿತರರು ಉಪಸ್ಥಿತರಿದ್ದರು.