ಚಾಮರಾಜನಗರ: ತರಗತಿಯಲ್ಲಿ ಪಾಠ ಕೇಳುತ್ತಿದ್ದ 4ನೇ ತರಗತಿ ವಿದ್ಯಾರ್ಥಿ ಹೃದಯಾಘಾತದಿಂದ ಬುಧವಾರ ಮೃತಪಟ್ಟಿದ್ದಾನೆ.
ಗುಂಡ್ಲುಪೇಟೆ ಪಟ್ಟಣದ ಕುರುಬಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮನೋಜ್‌ಕುಮಾರ್(10) ಮೃತ ಬಾಲಕ. ಬುಧವಾರ ಬೆಳಗ್ಗೆ 11 ಗಂಟೆ ಸಮಯದಲ್ಲಿ ತರಗತಿಯಲ್ಲಿ ಶಿಕ್ಷಕರು ಪಾಠ ಮಾಡುತ್ತಿದ್ದರು. ಈ ವೇಳೆ ಕುಸಿದು ಬಿದ್ದ ವಿದ್ಯಾರ್ಥಿಯನ್ನು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಹೃದಯಾಘಾತದಿಂದ ಮೃತಪಟ್ಟಿರುವುದು ಗೊತ್ತಾಗಿದೆ. ಮೃತದೇಹವನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ರವಾನಿಸಿ ಶವ ಪರೀಕ್ಷೆ ನಡೆಸಲಾಯಿತು. ಸಂಜೆ ವೇಳೆಗೆ ಅಂತ್ಯಕ್ರಿಮೆ ಮಾಡಲಾಯಿತು.
ತಪಾಸಣೆ ವೇಳೆ ವ್ಯತ್ಯಾಸ ತಿಳಿಸಿದ್ದ ವೈದ್ಯರು: ಮೃತ ಬಾಲಕ ಮನೋಜ್‌ಕುಮಾರ್ ದೊಡ್ಡಹುಂಡಿ ಗ್ರಾಮದ ದಿವಂಗತ ನಾಗರಾಜು ಹಾಗೂ ನಾಗರತ್ನ ಅವರ ಪುತ್ರ. ನಾಗರತ್ನ ಖಾಸಗಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕಳೆದ ವರ್ಷ ಸರ್ಕಾರಿ ಶಾಲೆಯಲ್ಲಿ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿ ನಡೆಸಿದ್ದ ತಪಾಸಣೆ ವೇಳೆ ಮನೋಜ್‌ಕುಮಾರ್‌ನ ಹೃದಯದಲ್ಲಿ ವ್ಯತ್ಯಾಸ ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಮೈಸೂರಿನ ಆಸ್ಪತ್ರೆಗೆ ಕಳುಹಿಸಲು ವೈದ್ಯರು ಸೂಚನೆ ನೀಡಿದ್ದರು. ಬುಧವಾರ ತರಗತಿಯಲ್ಲಿ ಪಾಠ ಕೇಳುವಾಗ ಮನೋಜ್‌ಕುಮಾರ್ ಕುಸಿದು ಬಿದ್ದಿದ್ದಾನೆ. ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಮೃತಪಟ್ಟಿರುವುದು ಗೊತ್ತಾಯಿತು ಎಂದು ಗುಂಡ್ಲುಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಸ್ವಾಮಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ.