ತರಗತಿಗಳಲ್ಲಿ ದೇಶದ ಭವಿಷ್ಯ ನಿರ್ಮಾಣ

oplus_0
oplus_0
Published on

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಶಾಲಾ ಮಕ್ಕಳ ಆರೋಗ್ಯ ಕಾಪಾಡಿದಲ್ಲಿ ಭವಿಷ್ಯದಲ್ಲಿ ಸದೃಡ ಸಮಾಜ ನಿರ್ಮಾಣವಾಗಲಿದೆ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು. ನಗರದ ಬಸವನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಇಲಾಖೆ, ಅಕ್ಷರದಾಸೋಹ ಹಾಗೂ ಅಜೀಂ ಪ್ರೇಮ್ ಜಿ ಪ್ರತಿಷ್ಠಾನದ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ಪೂರಕ ಪೌಷ್ಠಿಕ ಆಹಾರ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಶಾಲೆಗಳಲ್ಲಿನ ತರಗತಿಗಳಲ್ಲಿ ದೇಶದ ಭವಿಷ್ಯ ನಿರ್ಮಾಣವಾಗಲಿದೆ ಎಂದು ಶಿಕ್ಷಣ ತಜ್ಞರು ಅಭಿಪ್ರಾಯಪಟ್ಟಿರುವುದು ಸತ್ಯ ಸಂಗತಿ. ಆಧುನಿಕತೆಯ ದಿನಗಳಲ್ಲಿ ಸಮತೋಲನ ಆಹಾರ ಸೇವನೆ ಎಲ್ಲರಿಗೂ ಕಷ್ಟ. ಗ್ರಾಮೀಣ ಪ್ರದೇಶದಲ್ಲಿ ಮಧ್ಯಮ ಹಾಗೂ ಆರ್ಥಿಕವಾಗಿ ಬಡಜನರು ಅಧಿಕ ಸಂಖ್ಯೆಯಲ್ಲಿದ್ದಾರೆ. ಇದನ್ನು ಮನಗಂಡು ಸರ್ಕಾರ ವಾರದ 6 ದಿನ 1 ರಿಂದ 10 ನೇ ತರಗತಿ ಮಕ್ಕಳಿಗೆ ಮೊಟ್ಟೆ ವಿತರಣೆ ಮಾಡಲು ಮುಂದಾಗಿದೆ. ಯೋಜನೆ ಪ್ರಯೋಜನವನ್ನು ಎಲ್ಲ ಮಕ್ಕಳು ಪಡೆದುಕೊಳ್ಳುವಂತೆ ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಸಿ.ರಮೇಶ್ ಮಾತನಾಡಿ, ಈ ಮೊದಲು ವಾರದಲ್ಲಿ 2 ದಿನ ಮಾತ್ರ ಮೊಟ್ಟೆ, ಬಾಳೆಹಣ್ಣು, ಶೇಂಗಾ ಚಿಕ್ಕಿ ವಿತರಣೆ ಮಾಡಲಾಗುತ್ತಿತ್ತು. ಇದೀಗ 6 ದಿನ ವಿತರಣೆ ಮಾಡಲಾಗುತ್ತಿದೆ. ಅಡುಗೆ ತಯಾರಿ ವೇಳೆ, ಕೋಣೆಗಳಲ್ಲಿ ಶುಚಿತ್ವ ಕಾಪಾಡಿಕೊಳ್ಳುವಂತೆ ತಿಳಿಸಿದರು.
ಶಿಕ್ಷಕರ ಸಮಸ್ಯೆ ಆಲಿಕೆ: ಕಾರ್ಯಕ್ರಮದ ಬಳಿಕ ಮುಖ್ಯಶಿಕ್ಷಕರ ಕೊಠಡಿಯಲ್ಲಿ ಶಿಕ್ಷಕರೊಂದಿಗೆ ಮಾತುಕತೆ ನಡೆಸಿದ ಶಾಸಕ ಎನ್.ಶ್ರೀನಿವಾಸ್ ಸರ್ಕಾರದಿಂದ ಶಾಲೆಗೆ ಆಗಬೇಕಿರುವ ಕೆಲಸ ಕಾರ್ಯಗಳು, ಶಾಲೆಯಲ್ಲಿನ ಸಮಸ್ಯೆಗಳು ಸೇರಿ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ, ಸರ್ಕಾರಿ ಶಿಕ್ಷಕರು ಹಾಗೂ ಅತಿಥಿ ಶಿಕ್ಷಕರ ಮಾಹಿತಿ ಸಂಗ್ರಹಿಸಿದರು.


ಅತಿಥಿ ಶಿಕ್ಷಕರ ವೇತನ ಹೆಚ್ಚಳ ಮಾಡುವ ಬಗ್ಗೆ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ವಾಸುದೇವಮೂರ್ತಿ ಶಾಸಕರ ಬಳಿ ಪ್ರಸ್ತಾಪಿಸಿದರು.
ನಗರಸಭೆ ಅಧ್ಯಕ್ಷೆ ಪೂರ್ಣಿಮಾ ಸುಗ್ಗರಾಜು, ಉಪಾಧ್ಯಕ್ಷೆ ಸುಜಾತಾ ಮುನಿಯಪ್ಪ, ಸದಸ್ಯ ಕೆ.ಎಂ.ಶಿವಕುಮಾರ್, ನರಸಿಂಹಮೂರ್ತಿ, ಎನ್.ಗಣೇಶ್, ಜಿ.ಆನಂದ್, ಸುಧಾಕೃಷ್ಣಪ್ಪ, ಲೋಲಾಕ್ಷಿ ಗಂಗಾಧರ್, ಶಾರದಾ ಉಮೇಶ್, ರಾಜಮ್ಮಪಿಳ್ಳಪ್ಪ, ಭಾಗ್ಯಾ ನರಸಿಂಹಮೂರ್ತಿ, ಪುಷ್ಪಲತಾ, ಹೆಚ್ಚುವರಿ ಸದಸ್ಯ ಕೃಪಾನಂದ್, ರಾಮಮೂರ್ತಿ, ಆಂಜಿನಮೂರ್ತಿ, ಮುನಿರಾಜು, ನೆ.ಯೋ.ಪ್ರಾಧಿಕಾರದ ಮಾಜಿ ಅಧ್ಯಕ್ಷ ಎನ್.ಪಿ.ಹೇಮಂತ ಕುಮಾರ್, ತಾಪಂ ಸ್ಥಾಯಿಸಮಿತಿ ಮಾಜಿ ಅಧ್ಯಕ್ಷ ಡಾ.ರಂಗನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ನಾಗರಾಜು, ಮುಖಂಡರಾದ ಎಂ.ಕೆ.ನಾಗರಾಜು, ಉಮೇಶ್‌ಗೌಡ, ರವಿ ಇದ್ದರು.

ಮಕ್ಕಳೊಂದಿಗೆ ಊಟ ಮಾಡಿದ ಶಾಸಕರು: ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ಶಾಲಾ ಮಕ್ಕಳಿಗೆ ಸ್ವತಃ ಶಾಸಕರು ಮೊಟ್ಟೆ ವಿತರಣೆ ಮಾಡಿ ಬಳಿಕ ಮಕ್ಕಳ ಸಾಲಿನಲ್ಲಿ ಕುಳಿತು ಊಟ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net