

ಕೆ.ಆರ್.ಸಾಗರ: ಕೆ.ಆರ್.ಸಾಗರದ ರಾಯಕೋಟೆ ಫೈಲ್‌ವಾರ್ಡ್‌ನಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಬುಧವಾರ ಕೆ.ಆರ್.ಸಾಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ. ಸುದೀಪ್ ‘ಪೋಷಣ್ ಅಭಿಯಾನ’ ಮಾಸಾಚರಣೆಗೆ ಚಾಲನೆ ನೀಡಿದರು.
ದಿನ ನಿತ್ಯ ಸೇವನೆ ಮಾಡುವ ಆಹಾರವನ್ನು ಕ್ರಮಬದ್ಧವಾಗಿ ವೈದ್ಯರ ಸಲಹೆಯಂತೆ ಸೇವಿಸಬೇಕು. ನಮ್ಮಲ್ಲಿ ಸಿಗುವ ಸೊಪ್ಪು, ತರಕಾರಿ, ಹಣ್ಣುಗಳಿಂದ ಉತ್ತಮ ಪೌಷ್ಟಿಕಾಂಶ ಸಿಗುತ್ತದೆ. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ತಿಳಿದುಕೊಂಡು ಸಮರ್ಪಕವಾಗಿ ಬಳಸಿಕೊಳ್ಳಿ ಎಂದು ಅವರು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಬೆಳಗೊಳ ವೃತ್ತದ ಮೇಲ್ವಿಚಾರಕಿ ಪುಷ್ಪಾವತಿ ಮಾತನಾಡಿ, ಇಂದಿನ ದಿನಗಳಲ್ಲಿ ಗರ್ಭಿಣಿ ಮಹಿಳೆಯರಲ್ಲಿ ಪೌಷ್ಟಿಕತೆ ಕಡಿಮೆಯಾಗುತ್ತಿದೆ. ಇದಕ್ಕೆ ಒತ್ತಡದ ಜೀವನಶೈಲಿ ಕಾರಣವಾಗಿದೆ. ಸರ್ಕಾರದ ವತಿಯಿಂದ ಗರ್ಭಿಣಿ ಮಹಿಳೆ ಮತ್ತು ಹುಟ್ಟುವ ಮಕ್ಕಳ ಪೌಷ್ಟಿಕತೆ ಹೆಚ್ಚಿಸಲು ಅಂಗನವಾಡಿ ಮೂಲಕ ಪೌಷ್ಟಿಕ ಅಹಾರ ನೀಡಲಾಗುತ್ತಿದೆ. ಇದರ ಬಗ್ಗೆ ಅಂಗನವಾಡಿ ಸಹಾಯಕಿಯರು ನೀಡುವ ಸಲಹೆ, ಸೂಚನೆ ಪಾಲನೆ ಮಾಡಬೇಕು ಎಂದರು.
ಇದೇ ಸಂದರ್ಭದಲ್ಲಿ ಪೌಷ್ಟಿಕ ಆಹಾರಗಳ ತಯಾರಿಕೆ ಮತ್ತು ವಸ್ತುಪ್ರದರ್ಶನ ಏರ್ಪಡಿಸಲಾಗಿತ್ತು. ಕೆ.ಆರ್.ಸಾಗರ ಗ್ರಾ.ಪಂ. ಸದಸ್ಯೆ ಮಂಜುಳಾ, ಕೆ.ಆರ್.ಸಾಗರ ಪ್ರಾ.ಆ. ಕೇಂದ್ರದ ಹಿರಿಯ ಆರೋಗ್ಯ ಸಹಾಯಕಿ ಗೀತಾ, ಸೌಮ್ಯಾ, ಜಯಶೀಲಾ ಸೇರಿದಂತೆ ಅಂಗನವಾಡಿ ಸಹಾಯಕಿಯರು, ಗರ್ಭಿಣಿ ಮಹಿಳೆಯರು ಇತರರಿದ್ದರು.