

ಹುಬ್ಬಳ್ಳಿ: ಇಲ್ಲಿಯ ಅಮರಗೋಳ ಎಪಿಎಂಸಿ ಪ್ರಾಂಗಣದಲ್ಲಿರುವ ತರಕಾರಿ ಸಗಟು ಮಾರುಕಟ್ಟೆಯಲ್ಲಿ ಜನರು ಪರಸ್ಪರ ಅಂತರ ಕಾಯ್ದುಕೊಳ್ಳದೇ ವ್ಯಾಪಾರ ವಹಿವಾಟು ನಡೆಸುವುದು ನಿತ್ಯದ ಕಾಯಕವಾಗಿದೆ.
ಕರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಕಳೆದೊಂದು ವಾರದಿಂದ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಇಲ್ಲಿಯೇ ಠಿಕಾಣಿ ಹೂಡಿ ತರಕಾರಿ ಮಾರುಕಟ್ಟೆಯಲ್ಲಿ ಹಲವು ಬದಲಾವಣೆಗಳನ್ನು ತಂದಿವೆ.
ನಾಲ್ಕು ದಿನಗಳ ಹಿಂದೆ ಈಗಿರುವ ತರಕಾರಿ ಮಾರುಕಟ್ಟೆ ಅಕ್ಕಪಕ್ಕದ ದೊಡ್ಡ ರಸ್ತೆಗಳನ್ನು ಬಳಸಿಕೊಂಡು 75ಕ್ಕೂ ಹೆಚ್ಚು ಸಗಟು ಮಾರಾಟ ಮಳಿಗೆಗಳನ್ನು ನಿರ್ವಿುಸಿ ಕೊಡಲಾಗಿತ್ತು. ಆದರೂ, ಅಲ್ಲಲ್ಲಿ ಗುಂಪು ನಿಲ್ಲುವುದು ನಿಂತಿಲ್ಲ. ಬುಧವಾರ ಇನ್ನಷ್ಟು ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಒಟ್ಟು ಮಳಿಗೆಗಳನ್ನು 110ಕ್ಕೆ ಹೆಚ್ಚಿಸಲಾಗಿದೆ.
ಬೆಳಗ್ಗೆ 7 ಗಂಟೆಯಿಂದ 10 ಗಂಟೆ ವರೆಗೆ ನಡೆಯುವ ತರಕಾರಿ ಸಗಟು ವ್ಯಾಪಾರಕ್ಕೆ ಜನ ಮುಗಿ ಬೀಳುವುದಕ್ಕೆ ಎಷ್ಟೇ ಕಡಿವಾಣ ಹಾಕಿದರೂ ಜನ ಮಾತ್ರ ಬುದ್ಧಿ ಕಲಿಯುತ್ತಿಲ್ಲ. ತರಕಾರಿ ಸಗಟು ವರ್ತಕರು, ಚಿಲ್ಲರೆ ವ್ಯಾಪಾರಸ್ಥರು ಸಹ ಪರಸ್ಪರ ಅಂತರ ಕಾಯ್ದುಕೊಳ್ಳುವ ಕೆಲಸ ಮಾಡುತ್ತಿಲ್ಲ.
ರೈತರು ಎಪಿಎಂಸಿಗೆ ತರಕಾರಿ ತಂದು ಹಾಕುತ್ತಾರೆ. ಆದರೆ, ಅದನ್ನು ಬೇಕಾಬಿಟ್ಟಿ ದರಕ್ಕೆ ಖರೀದಿಸುವ ವ್ಯಾಪಾರಸ್ಥರು ಅದೇ ತರಕಾರಿಯನ್ನು ಮೂರ್ನಾಲ್ಕು ಪಟ್ಟು ಹೆಚ್ಚಿನ ದರಕ್ಕೆ ನಗರದ ವಿವಿಧೆಡೆ ಮಾರಾಟ ಮಾಡುತ್ತಿದ್ದಾರೆ. ಟೊಮ್ಯಾಟೊ ಬಾಕ್ಸ್ವೊಂದಕ್ಕೆ (20 ಕೆಜಿ) 200 ರೂ. ಇದ್ದರೆ ಅದೇ ಟೊಮ್ಯಾಟೊ ಬಡಾವಣೆಗಳಲ್ಲಿ ಜನರಿಗೆ 30- 40 ರೂ. ಗೆ ಕೆಜಿಯಂತೆ ಬಿಕರಿಯಾಗುತ್ತಿದೆ. ಇದೇ ರೀತಿ ಬಹುತೇಕ ತರಕಾರಿಯದ್ದಾಗಿದೆ.
ಒಟ್ಟಾರೆ ತರಕಾರಿ ಮಾರುಕಟ್ಟೆಯಲ್ಲಿ ಗದ್ದಲ, ದಟ್ಟಣೆ ಮಾತ್ರ ನಿರಂತರ ಎಂಬಂತಾಗಿದೆ. ಪರಸ್ಪರ ಅಂತರ ಕಾಯ್ದುಕೊಳ್ಳದವರ ಮೇಲೆ ಪೊಲೀಸರು ಈಗಾಗಲೇ ಹಲವರ ಮೇಲೆ ಕೇಸ್ ದಾಖಲಿಸಿದ್ದಾರೆ. ಬುಧವಾರ ಕೂಡ ಪರಿಶೀಲನೆ ನಡೆಸಲಾಗಿದೆ. ವರ್ತಕರು, ರೈತರು, ಚಿಲ್ಲರೆ ಮಾರಾಟಗಾರರು, ಸಾರ್ವಜನಿಕರಿಗೆ ತಿಳಿವಳಿಕೆ ನೀಡಲಾಗಿದೆ. ಆರಂಭದಲ್ಲಿ ಗದ್ದಲ ಇದ್ದದ್ದು ನಂತರದಲ್ಲಿ ಒಂದಿಷ್ಟು ಬದಲಾವಣೆಯಾಗಿದೆ.
ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ವ್ಯಾಪಾರಸ್ಥರು, ಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ದಟ್ಟಣೆಯಾಗುತ್ತಿರುವ ಹಿನ್ನೆಲೆಯಲ್ಲಿ ವರ್ತಕರು, ಜನರಿಗೆ ತಿಳಿವಳಿಕೆ ನೀಡಲಾಗುತ್ತಿದೆ. ಮಳಿಗೆಗಳ ಸಂಖ್ಯೆಯನ್ನೂ ಹೆಚ್ಚಿಸಲಾಗಿದೆ. ಕರೊನಾ ಸೋಂಕು ನಿಯಂತ್ರಣ ಹಿನ್ನೆಲೆಯಲ್ಲಿ ಪರಸ್ಪರ ಅಂತರ ಕಾಯ್ದುಕೊಳ್ಳದ ಹಲವರ ಮೇಲೆ ಈಗಾಗಲೇ ಪ್ರಕರಣ ದಾಖಲಿಸಿಕೊಂಡಿದ್ದೇವೆ. | ಪ್ರಭು ಸೂರಿನ್ ಎಪಿಎಂಸಿ ನವನಗರ ಠಾಣೆ ಪಿಐ